ಮುಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಮನೋಹರ ಕೋಟ್ಯಾನ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿತ್ರ ರವರು ಮಳೆಗಾಲದಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಹರಡದಂತೆ ಸ್ವಚ್ಛತೆ ಕಾಪಾಡುವಂತೆ ಗ್ರಾಮಸ್ಥರಿಗೆ ವಿನಂತಿಸಿದರು.
ಈ ಸಂದರ್ಭ ಗ್ರಾಮಸ್ಥ ರವೀಂದ್ರ ಕಿಣಿ ಮಾತನಾಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದ್ದು ನೇಮಕ ಮಾಡುವಂತೆ ಆಗ್ರಹಿಸಿದರು. ಮೊದಲೇ ಕೆಟ್ಟು ಹೋಗಿರುವ ಪಂಚಾಯತ್ ವ್ಯಾಪ್ತಿಯ ಮಟ್ಟು ರಸ್ತೆಯಲ್ಲಿ ಮಳೆಗಾಲದಲ್ಲಿ ಜಲಜೀವನ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ರಸ್ತೆ ಕೆಸರುಮಯವಾಗಿದ್ದು ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥ ಧನಂಜಯ ಮಟ್ಟು. ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ತಾಕೀತು ಮಾಡಿದರು.
ಕೆಟ್ಟು ಹೋಗಿರುವ ಮಟ್ಟು ರಸ್ತೆ ದುರಸ್ತಿ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ? ಯಾಕೆ ಇನ್ನೂ ಕಾಮಗಾರಿ ನಡೆದಿಲ್ಲ? ಎಂದು ಧನಂಜಯ ಮಟ್ಟು ಪ್ರಶ್ನಿಸಿದಾಗ ಅಧ್ಯಕ್ಷ ಮನೋಹರ ಕೋಟ್ಯಾನ್ ಉತ್ತರಿಸಿ 3 ಕೋಟಿ ಶಾಸಕರ ವಿಶೇಷ ಪ್ರಯತ್ನದಿಂದ ಬಿಡುಗಡೆಯಾಗಿದೆ ಹಾಗೂ ನಡಿ ಕೊಪ್ಪಲದಲ್ಲಿ ವೆಂಕಟೇಶ್ ಡ್ಯಾಮ್ ಗೆ ಮನವಿ ಸಲ್ಲಿಸಲಾಗಿದೆ ಎಂದರು.
ಆದರೆ ಇದಕ್ಕೆ ತೃಪ್ತರಾಗದ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು.
ಮಳೆಗಾಲದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವುದು ತಪ್ಪು ಆದರೆ ಕಾಮಗಾರಿ ಬೇಗ ಪೂರ್ತಿಗೊಳಿಸಲು ಈ ರೀತಿ ಮಾಡಬೇಕಾಯಿತು ಎಂದು ಜಿಪಂ ಇಂಜಿನಿಯರ್ ಪ್ರಶಾಂತ ಆಳ್ವ ಈ ಸಂದರ್ಭ ಹೇಳಿದರು.
ಪಂಜಿನಡ್ಕ ಮುರತಕಟ್ಟ ಬಳಿ ಜಲಜೀವನ್ ಕಾಮಗಾರಿ ವೇಳೆ ಬಾವಿ ತೋಡಿದ ಮಣ್ಣನ್ನು ಸಾರ್ವಜನಿಕರ ತೋಡಿಗೆ ಹಾಕಿದ್ದಾರೆ ಎಂದು ದಿನೇಶ್ಚಂದ್ರ ಅಜಿಲ ದೂರಿ ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಟ್ಟು ಬ್ರಹ್ಮಶ್ರೀ ನಾರಾಯಣಗುರು ಸಭಾಭವನಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಅಧಿಕಾರದಲ್ಲಿರುವಾಗ 25 ಲಕ್ಷ ಬಿಡುಗಡೆಯಾಗಿದ್ದು, 18.5 ಮಂಜೂರಾಗಿದ್ದು ಹಣ ಎಲ್ಲಿ ಹೋಯಿತು? ಎಂದು ಗ್ರಾಮಸ್ಥ ಉದಯ ಅಮೀನ್ ಪ್ರಶ್ನಿಸಿದರು.
ಪಂಚಾಯತಿ ವ್ಯಾಪ್ತಿಯಲ್ಲಿಕಳೆದ ಕೆಲ ತಿಂಗಳಿನಿಂದ ಪೊಲೀಸ್ ಬೀಟ್ ಸಭೆ ನಡೆದಿಲ್ಲ ಎಂದು ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕಾಟಾಚಾರದ ಗ್ರಾಮ ವಾಸ್ತವ್ಯ ಸಭೆ, ಅಕ್ರಮ ಬಿಪಿಎಲ್ ಕಾರ್ಡುದಾರರ ಬಗ್ಗೆ ತನಿಖೆ ನಡೆಸಿ, ಖಾಯಂ ಗ್ರಾಮಕರಣಿಕರ ನೇಮಕಕ್ಕೆ ಒತ್ತಾಯ, ಗೋಮಾಳ ಜಾಗದ ಬಗ್ಗೆ ಶೀಘ್ರ ಇತ್ಯರ್ಥ, ಅತಿಕಾರಿಬೆಟ್ಟು ಗ್ರಾಮದ ಗಡಿ ಗುರುತು ಮೊದಲಾದ ಪ್ರಶ್ನೆಗಳಲ್ಲಿ ಗ್ರಾಮಸ್ಥರಾದ ವಿಜಯ ಶೆಟ್ಟಿ, ರವೀಶ್ ಕಾಮತ್, ರತ್ನಾಕರ ಮಂದಾಡಿ, ಸಾಧು ಅಂಚನ್ ಮತ್ತಿತರರು ಭಾಗವಹಿಸಿದ್ದರು.
ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಸುನಿತಾ ಹಾಗೂ ಪಂಚಾಯತ್ ಉಪಾಧ್ಯಕ್ಷೆ, ಸದಸ್ಯರು ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/06/2022 05:17 pm