ಮುಲ್ಕಿ: ಕೈಗಾರಿಕಾ ವಲಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮದ 1091 ಎಕರೆ ಕೃಷಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಗಾಗಿ ಸರಕಾರ ಭೂಸ್ವಾಧೀನ ಮಾಡುವ ಬಗ್ಗೆ ಗ್ರಾಮಸ್ಥರು ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದು ಕೂಡಲೇ ಸರಕಾರ ಪ್ರಸ್ತಾವನೆ ಕೈಬಿಡಬೇಕು ಎಂದು ಬಳ್ಕುಂಜೆ ಕೊಲ್ಲೂರು ಉಳೆಪಾಡಿ ಗ್ರಾಮಗಳ ನಾಗರಿಕರ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಡಾ. ಶಂಕರ ಶೆಟ್ಟಿ ಬಳ್ಕುಂಜೆ ಚರ್ಚ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಅವರು ಮಾಧ್ಯಮದ ಜೊತೆ ಮಾತನಾಡಿ ಬಳಕುಂಜೆ ಪರಿಸರದ ಜನ ಜೀವನೋಪಾಯಕ್ಕಾಗಿ ಕೃಷಿಭೂಮಿಯನ್ನು ಅವಲಂಬಿಸಿದ್ದು ಭೂಸ್ವಾಧೀನ ವಾದರೆ ಪರಿಸರಕ್ಕೆ ಮಾರಕ ಉಂಟಾಗಿ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯಕ್ಕೆ ಹಾನಿಕರ ವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು
ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜಾ ಮಾತನಾಡಿ ಸ್ಥಳೀಯ ಪಂಚಾಯತ್ ಗಮನಕ್ಕೆ ತಾರದೆ ಗ್ರಾಮೀಣ ಭಾಗದ ಕೃಷಿಕರನ್ನು ಹಾಗೂ ಜನಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಭೂಸ್ವಾಧೀನಕ್ಕಾಗಿ ಸರ್ವೆ ಕಾರ್ಯಕ್ರಮ ನಡೆದು ಪ್ರತಿ ಮನೆಮನೆಗೆ ತೆರಳಿ ಕೆಐಡಿಬಿ ಅಧಿಕಾರಿಗಳಿಂದ ನೋಟಿಸ್ ನೀಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ ಇದರಿಂದಾಗಿ ಗ್ರಾಮದಲ್ಲಿ ಸಂಶಯಾತ್ಮಕ ವಾತಾವರಣ ಸೃಷ್ಟಿಯಾಗಿದ್ದು ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಕಳ್ಳರಂತೆ ನೋಡುವ ಪ್ರಮೇಯ ಉಂಟಾಗಿದೆ. ಕೂಡಲೇ ಗ್ರಾಮಸ್ಥರು ಎಚ್ಚೆತ್ತು ಜನಜಾಗೃತಿ ಸಮಿತಿ ಸಭೆಗೆ ಬೆಂಬಲ ಸೂಚಿಸಿ ಕೃಷಿಭೂಮಿ ಉಳಿಸಲು ಹೋರಾಟ ನಡೆಸಬೇಕಾಗಿದೆ ಎಂದರು.
ಪ್ರತಿಷ್ಠಿತ ಕೊಲ್ಲೂರು ಕಾಂತಾಬಾರೆ ಬೂದಬಾರೆ ಜನ್ಮ ಕ್ಷೇತ್ರಾಧಿಕಾರಿ ಗಂಗಾಧರ ಪೂಜಾರಿ ಮಾತನಾಡಿ ಧಾರ್ಮಿಕ ಕ್ಷೇತ್ರವಾದ ಕಾಂತಬಾರೆ ಬೂದಬಾರೆ ಜನ್ಮ ಕ್ಷೇತ್ರದ ಗದ್ದೆ, ಇತಿಹಾಸದ ಮರ , ಕೃಷಿ ಭೂಮಿ, ಉಳೆಪಾಡಿ ದೇವಸ್ಥಾನ ಮಸೀದಿ ಮತ್ತು ಸ್ಥಳ, ಕೆಲ ಧಾರ್ಮಿಕ ಕ್ಷೇತ್ರಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಇದೆ ಎಂದು ಆತಂಕ ವ್ಯಕ್ತಪಡಿಸಿ ಜನ ಜಾಗೃತರಾಗಬೇಕಾಗಿದೆ ಎಂದರು
ಪರಿಸರ ಪ್ರೇಮಿ ಫ್ರಾನ್ಸಿಸ್ ಮಿನೇಜಸ್ ಮಾತನಾಡಿ ಬಳ್ಕುಂಜೆ ಪರಿಸರ ಸುಂದರ ಪ್ರಕೃತಿಯ ಶಾಂಭವಿ ನದಿ ನೀರು ಕೈಗಾರಿಕೆಗೆ ಹೋದರೆ ಪರಿಸರ ಮಾಲಿನ್ಯ ಸಾಧ್ಯತೆ ಇದೆ ಈಗಾಗಲೇ ಸಮೀಪದ ಪಡುಬಿದ್ರೆ ಪರಿಸರದಲ್ಲಿ ಸುಜ್ಲಾನ್, ಯುಪಿಸಿಎಲ್ ನಿಂದ ಹಾರುಬೂದಿ ಉತ್ಪತ್ತಿಯಾಗಿ ಈಗಲೂ ಬಳ್ಕುಂಜೆ ಪರಿಸರದ ತೆಂಗಿನ ಮರ ಸಹಿತ ಕೃಷಿ ಹಾನಿ ಸಂಭವಿಸಿದೆ ಎಂದು ಹೇಳಿ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೋರಾಟ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸೋಜ ಮಾತನಾಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಸರಕಾರದ ಕೃಷಿಭೂಮಿ ಸ್ವಾಧೀನಪಡಿಸುವ ವಿರುದ್ಧ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಕೊಲ್ಲೂರು ಗ್ರಾಮದ ಹಿರಿಯರಾದ ಐತಪ್ಪ ಸಾಲ್ಯಾನ್, ಬಳ್ಕುಂಜೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಫ್ರೀಡಾ ರೋಡ್ರಿಗಸ್ ಮತ್ತಿತರರು ಮಾತನಾಡಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Kshetra Samachara
02/06/2022 08:18 pm