ಮಂಗಳೂರು: ಶಾಲಾ ಕಾಲೇಜುಗಳಲ್ಲಿ ತಲೆದೂರಿದ್ದ ಹಿಜಾಬ್ ಸಮಸ್ಯೆಯನ್ನು ಮುಸ್ಲಿಂ ಜನಪ್ರತಿನಿಧಿಗಳು ಮನಸ್ಸು ಮಾಡಿದ್ದರೆ ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು ಎಂದು ಹಿಜಾಬ್ ಪರ ಸುಪ್ರೀಂ ಕೋರ್ಟ್ ಮೇಲ್ಮನವಿದಾರ, ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ಕೇವಲ ಕಾಲೇಜುಗಳಿಗಷ್ಟೇ ಸೀಮಿತವಾಗಿಲ್ಲ. ನಮ್ಮ ತಾಯಿ, ತಂಗಿಯಂದಿರು ಹಿಂದಿನಿಂದಲೂ ಧರಿಸಿಕೊಂಡು ಬಂದಿದ್ದಾರೆ. ಪ್ರವಾದಿವರ್ಯರ ಕಾಲದಿಂದಲೂ ಶಿರವಸ್ತ್ರಕ್ಕೆ ಗೌರವ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಅನಗತ್ಯವಾಗಿ ಹಿಜಾಬ್ ವಿವಾದವನ್ನು ಸೃಷ್ಟಿಸಲಾಯಿತು. ಹೈಕೋರ್ಟ್‌ಗೆ ಹಿಜಾಬ್ ವಿಚಾರವನ್ನು ಕೊಂಡೊಯ್ದರ ಹಿಂದೆಯೂ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.
ಮುಸ್ಲಿಂ ಶಾಸಕ, ಸಂಸದರು ಎಲ್ಲಿ ಮಾತಾಡಬೇಕಿತ್ತೋ ಅಲ್ಲಿ ಮಾತನಾಡಲಿಲ್ಲ. ಸಂಸತ್, ವಿಧಾನಸಭೆಯಲ್ಲಿ ಚರ್ಚಿಸಿಲ್ಲ. ಶಿಕ್ಷಣ ಸಚಿವರ ಬಳಿಗೆ ತೆರಳಿ ಹಿಜಾಬ್‌ಗೆ ವಿಚಾರವಾಗಿ ಒತ್ತಡ ಹೇರಿಲ್ಲ. ಇಂತಹ ಜನಪ್ರತಿನಿಧಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಲೇಸು ಎಂದರು.
Kshetra Samachara
19/06/2022 04:43 pm