ವಿದ್ಯುತ್ ಕಂಬದಿಂದ ಸಂಚಾರ ತೊಂದರೆ: ಯೋಜನಾ ಪ್ರದೇಶದವರೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಮಾಡಲಾಗಿದ್ದರೂ, ಬಂದರು ಮತ್ತು ಮೀನುಗಾರಿಕಾ ಇಲಾಖೆ ಮೂಲಕ ಒಂದು ಕೋಟಿ ರೂ. ವೆಚ್ಚದಲ್ಲಿ ಪಡುಬಿದ್ರಿ ಬೀಚ್ ಎಂಡ್ ಪಾಯಿಂಟ್ನಿಂದ ನಡಿಪಟ್ಣದವರೆಗೆ ವಿಸ್ತಾರಗೊಳಿಸಿ ಕಾಂಕ್ರೀಟ್ ಅಳವಡಿಸಲಾಗಿದೆ.
ಆದರೆ ರಸ್ತೆ ನಿರ್ಮಾಣದ ವೇಳೆ ಮಧ್ಯದಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರಿಸದೆ ಕಾಂಕ್ರೀಟ್ ಮಾಡಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಬೀಚ್ ಆವರಣದಲ್ಲಿ 45 ವಾಹನಗಳಿಗಷ್ಟೇ ನಿಲುಗಡೆ ವ್ಯವಸ್ಥೆಯಿದ್ದು, ಪ್ರವೇಶ ದ್ವಾರದಲ್ಲಿ ಕಲ್ಪಿಸಬೇಕಾದ ಪಾರ್ಕಿಂಗ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಟ್ಯಾಂಕರ್ ನೀರೇ ಗತಿ: ಬೀಚ್ ಒಳಗಡೆ ನೀರಿನ ವ್ಯವಸ್ಥೆ ಇನ್ನೂ ಅನುಷ್ಠಾನವಾಗಿಲ್ಲ. ಪರಿಣಾಮ ದಿನಬಳಕೆ ಬೀಚ್ ಹಸಿರೀಕರಣಕ್ಕೆ ಟ್ಯಾಂಕರ್ ನೀರಿಗೆ ಹಣ ವ್ಯಯಿಸಬೇಕಾಗಿದೆ.
ದಿನಂಪ್ರತಿ 3 ಟ್ಯಾಂಕರ್ ನೀರು ಬಳಕೆಯಾಗುತ್ತಿದ್ದು, ಉಪಯೋಗಿಸಿದ ತ್ಯಾಜ್ಯ ನೀರು ಸಂಸ್ಕರಿಸಿ ಗಿಡಗಳಿಗೆ ಬಳಕೆ ಮಾಡಲಾಗುತ್ತಿದೆ.
ಬೇಸಿಗೆ ಹಾಗೂ ಪ್ರವಾಸಿಗರು ಹೆಚ್ಚಾದಲ್ಲಿ ಮತ್ತೆ ನೀರಿಗೆ ತೊಂದರೆ ಉಂಟಾಗಲಿದೆ. ನೀರು ಪೂರೈಕೆಗಾಗಿ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಬೀಡು ಬಳಿಯಲ್ಲಿ ಕೆಐಆರ್ ಡಿಎಲ್ ಮೂಲಕ ಕೊಳವೆಬಾವಿ ನಿರ್ಮಾಣ ಯೋಜನೆ ಹಾಕಿಕೊಂಡಿದ್ದರೂ, ಸ್ಥಳೀಯರ ವಿರೋಧದಿಂದ ಅದು ಇನ್ನೂ ಕಾರ್ಯಗತವಾಗಿಲ್ಲ.
ಬಿದಿರಿನ ಗುಡಿಸಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಾರದೊಳಗೆ ಪೂರ್ಣಗೊಳ್ಳಲಿದೆ. ಇಲ್ಲಿನ ಕಾಮಗಾರಿ ಅಂತಿಮಗೊಳಿಸಿ ವರದಿ ನೀಡಿದ ಬಳಿಕ ಉದ್ಘಾಟನೆ ನಡೆಯಲಿದೆ.
ಪ್ರಮುಖ ಸಂಪರ್ಕ ರಸ್ತೆ, ಪಾರ್ಕಿಂಗ್ ಹಾಗೂ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.
-ವಿಜಯ ಶೆಟ್ಟಿ, ಬ್ಲೂಫ್ಲ್ಯಾಗ್ ಬೀಚ್ ಪ್ರಬಂಧಕ
ಬ್ಲೂಫ್ಲ್ಯಾಗ್ ಬೀಚ್ ಸಂಪರ್ಕಿಸುವ ರಸ್ತೆಗಳು ಯಾವ ಇಲಾಖೆಗಳಿಗೆ ಸೇರಿವೆ ಎಂಬುದನ್ನು ತಿಳಿದುಕೊಂಡು ಅವರಲ್ಲಿ ಮಾತುಕತೆ ನಡೆಸಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು.
ನೀರು ಪೂರೈಸುವ ಯೋಜನೆ ಅನುಷ್ಠಾನ ಕುರಿತಂತೆ ಸೂಕ್ತ ನೀರಿರುವ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.
-ಸೋಮಶೇಖರ್, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಕೃಪೆ: ವಿ.ವಾ
Kshetra Samachara
30/11/2020 09:27 am