ಕುಂದಾಪುರ: ಪ್ರಧಾನಿ ಮೋದಿ ಅವರ ಸ್ವಚ್ಛಭಾರತ ಅಭಿಯಾನ ಎಲ್ಲಿ ಎಷ್ಟರಮಟ್ಟಿಗೆ ಅನುಷ್ಟಾನವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕುಂದಾಪುರದ ಪಾಲಿಗಂತೂ ಸ್ವಚ್ಛತೆಯ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಸ್ಪಷ್ಟ ಉದಾಹರಣೆ ಕುಂದಾಪುರದ ಹೃದಯಭಾಗದಲ್ಲಿರುವ ತಾಲೂಕು ಪಂಚಾಯತ್ ಕಚೇರಿ.
ಕುಂದಾಪುರ ತಾಲೂಕು ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಹರಿದ ಬಟ್ಟೆಗಳು ಜನರನ್ನ, ತಾಲೂಕು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳನ್ನು ಸ್ವಾಗತಿಸುತ್ತಿವೆ. ಹೀಗಿದ್ದರೂ ತಾಲೂಕು ಪಂಚಾಯತಿ ಸದಸ್ಯರು, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಕುಡಿದು ಖಾಲಿ ಮಾಡಿಟ್ಟ ಬಾಟಲಿಗಳೂ ಕಚೇರಿ ಕಂಪೌಂಡಿನಲ್ಲಿ ರಾರಾಜಿಸುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸಿದರೂ ಈ ಬಟ್ಟೆಗಳು ಮತ್ತು ಮದ್ಯದ ಬಾಟಲಿಗಳಿಗೆ ತಾಲೂಕು ಪಂಚಾಯತ್ ಆಗಲೀ ಕುಂದಾಪುರ ಪುರಸಭೆಯಾಗಲೀ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಕುಂದಾಪುರದಲ್ಲಿ ಕಳೆದ ಆರೆಂಟು ವರ್ಷಗಳಿಂದ ಹುಬ್ಬಳ್ಳಿ, ಧಾರವಾಡ, ಬೀದರ್, ಮೊದಲಾದ ಉತ್ತರ ಕರ್ನಾಟಕದ ಮಂದಿ ಕಾರ್ಮಿಕರಾಗಿ ವಲಸೆ ಬಂದು ದುಡಿಯುತ್ತಿದ್ದಾರೆ. ಇವರಿಗೆ ಇಲ್ಲಿ ಸರಿಯಾದ ವಸತಿ ವ್ಯವಸ್ಥೆ ಇಲ್ಲ. ವರ್ಷಾನುಗಟ್ಟಲೆ ಇಲ್ಲೇ ಬಿಡಾರ ಹೂಡುವ ವಲಸೆ ಕಾರ್ಮಿಕರು ಕುಂದಾಪುರದ ಕಚೇರಿ, ಅಂಗಡಿ ಮುಂಭಾಗಗಳಲ್ಲಿಯೇ ಮಲಗುತ್ತಾರೆ. ದುಡಿದು ಬಂದು ಬಟ್ಟೆಗಳನ್ನು ಒಗೆದು ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಒಣಗಿಸುತ್ತಾರೆ. ಇಡೀ ದಿನ ಬಟ್ಟೆಗಳು ಇಲ್ಲಿ ರಾರಾಜಿಸುತ್ತಿರುತ್ತವೆ. ರಾತ್ರಿ ಕುಡಿದಿಟ್ಟ ಬಾಟಲಿಗಳು ದಿನಗಟ್ಟಲೆ ಇದೇ ಕಂಪೌಂಡ್, ಗಾಂಧೀ ಮೈದಾನದ ಆವರಣ ಗೋಡೆಗಳಲ್ಲಿ ಪ್ರದರ್ಶನವಾಗುತ್ತವೆ. ಆದರೆ ಯಾವೊಬ್ಬ ಅಧಿಕಾರಿಗಳೂ ಇದನ್ನು ಗಮನಿಸಿಲ್ಲವೋ ಅಥವಾ ನೋಡದಂತಿದ್ದಾರೋ ಗೊತ್ತಿಲ್ಲ. ಆದರೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
Kshetra Samachara
07/08/2022 12:56 pm