ಬ್ರಹ್ಮಾವರ: ಬ್ರಹ್ಮಾವರ ರಾ.ಹೆ. 66ರ ಸರ್ವೀಸ್ ರಸ್ತೆಯಲ್ಲಿ ಚರಂಡಿ ಮುಚ್ಚಲು ಹಾಕಿರುವ ಚಪ್ಪಡಿಗಳು ಈಗ ಇಲ್ಲದೆ, ಎಲ್ಲೆಂದರಲ್ಲಿ ಚರಂಡಿಗಳು ಬಾಯಿ ತೆರೆದುಕೊಂಡಿವೆ!
ಇಲ್ಲಿನ ಸಿಟಿ ಸೆಂಟರ್ ಬಳಿಯಿಂದ ಧರ್ಮಾವರಂ ತನಕದ ಎರಡು ಭಾಗದ ಸರ್ವೀಸ್ ರಸ್ತೆ ಬದಿ ನೀರು ಹೋಗಲು ಚರಂಡಿ ನಿರ್ಮಿಸಲಾಗಿತ್ತು. ಚರಂಡಿಯಲ್ಲಿ ನೀರಿನೊಂದಿಗೆ ಕಸಕಡ್ಡಿ ಸಿಲುಕಿದಾಗ ತೆಗೆಯಲು ಮಾಡಲಾದ ಮುಚ್ಚಳ ಬಹುತೇಕ ಕಡೆ ತೆರೆದುಕೊಂಡಿದ್ದು, ಅಪಾಯ ಆಹ್ವಾನಿಸುತ್ತಿವೆ.
ವಿದ್ಯಾರ್ಥಿಗಳ ಸಹಿತ ಹಲವು ಮಂದಿ ಈ ರಸ್ತೆ ಮೂಲಕವೇ ಕಚೇರಿ ಇತರೆಡೆ ನಡೆದುಕೊಂಡು ಹೋಗುತ್ತಾರೆ. ಇಲ್ಲಿ ಬಿದ್ದು ಮೂಳೆ ಮುರಿತಕ್ಕೆ ಒಳಗಾದವರು ಹಲವರಿದ್ದಾರೆ.
ರಾತ್ರಿ ಹೊತ್ತು ಕೆಲವೆಡೆ ಬೆಳಕಿನ ವ್ಯವಸ್ಥೆ ಕೂಡ ಇಲ್ಲ. ಬಹುತೇಕ ಕಡೆ ನೀರು ಹರಿದು ಹೋಗುವ ಚರಂಡಿ ತೆರೆದ ಬಾವಿಯಂತಿದೆ. ಬಾಯ್ದೆರೆದ ಈ ಮ್ಯಾನ್ ಹೋಲ್ ಗಳಲ್ಲಿ ಜನರು ಕಸ ಇನ್ನಿತರ ತ್ಯಾಜ್ಯ ಎಸೆಯುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ.
ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ, ಕೇವಲ ಟೋಲ್ ವಸೂಲಿ ಮಾತ್ರ ಮಾಡುವುದಲ್ಲ. ರಸ್ತೆ ಸೌಂದರ್ಯ ವೃದ್ಧಿಗೆ ಬೆಳೆಸಿದ ಹೂ ಗಿಡಗಳ ನಿರ್ವಹಣೆ, ಮರಳಿನ ತೆರವು ಮತ್ತು ಸರ್ವೀಸ್ ರಸ್ತೆ ಚರಂಡಿಯ ಸಮರ್ಪಕ ನಿರ್ವಹಣೆ ಮಾಡುವ ಜವಾಬ್ದಾರಿಯನ್ನೂ ಹೊಂದಿದೆ ಎಂಬುದು ಸ್ಥಳೀಯರ ಕಿವಿಮಾತು.
Kshetra Samachara
28/03/2022 07:07 pm