ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆ ಮತ್ತು ಒಳಚರಂಡಿ ಸಂಪರ್ಕ (ಯುಜಿಡಿ) ಕಾಮಗಾರಿ ಕೆಲದಿನಗಳಿಂದ ನಡೆಯುತ್ತಿದೆ. ಈ ಎರಡೂ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ನಗರದ ಗುಂಡಿಬೈಲು ಪರಸರದ ಜನ ಹಿಡಿಶಾಪ ಹಾಕುವಂತಾಗಿದೆ.
ಈಗಾಗಲೇ ನಗರದ ಎಲ್ಲೆಂದರಲ್ಲಿ ಅಗೆದು ,ಹೊಂಡ ಮಾಡಿ ಇಡಲಾಗಿದೆ.ಮೊದಲೇ ನಗರದಲ್ಲಿ ಟ್ರಾಫಿಕ್ ಸಮಸ್ಯೆ ,ಈಗ ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಯಿಂದಾಗಿ ನಗರದ ಜನ ಪರದಾಡುವಂತಾಗಿದೆ.
ಕಾಮಗಾರಿಯಲ್ಲಿ ವಿಳಂಬ ಮತ್ತು ಬೇಕಾಬಿಟ್ಟಿ ಕಾಮಗಾರಿಯಿಂದ ಜನ ಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿಗಳು ಚುರುಕುಗೊಂಡಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಮುಗಿದಿದೆ.
ಮುಖ್ಯವಾಗಿ ಕಳೆದ ಕೆಲವು ದಿನಗಳಿಂದ ಗುಂಡಿಬೈಲು ಅಂಬಾಗಿಲು ಮುಖ್ಯರಸ್ತೆಯಲ್ಲಿ ಯುಜಿಡಿ ಮತ್ತು ವಾರಾಹಿ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ನಾಗಬನದ ಮುಂಭಾಗ ನಡೆಯುತ್ತಿರುವ ಕಾಮಗಾರಿ ಕಳೆದ 5 ದಿನಗಳಿಂದ ನಿಂತಿದೆ. ಅರ್ಧಕ್ಕೆ ಅಲ್ಲಲ್ಲಿ ಕಾಮಗಾರಿ ನಡೆಸಿ ನಿಲ್ಲಿಸುವುದರಿಂದ ಸ್ಥಳೀಯರ ಓಡಾಟಕ್ಕೆ ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಧೂಳಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇಲ್ಲಿದ್ದು ಕಾಮಗಾರಿ ನಡೆಯುವ ರಸ್ತೆಯನ್ನು ಬಂದ್ ಮಾಡಿ, ಇನ್ನೊಂದು ಬದಿಯಲ್ಲಿ ಎರಡು ಕಡೆಯಲ್ಲಿ ಸಾಗುವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಇಲ್ಲಿ
ಅಪಘಾತಗಳು ಸಂಭವಿಸಿದ ಉದಾಹರಣೆಗಳೂ ಇವೆ.
ಉಡುಪಿ ನಗರ ಮಾತ್ರವಲ್ಲದೆ ಮಣಿಪಾಲದ ಹಲವು ಭಾಗಗಳಲ್ಲೂ ವಾರಾಹಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ.ಅಭಿವೃದ್ಧಿ ಕಾಮಗಾರಿ ಬೇಕು.ಆದರೆ ಅದನ್ನು ವ್ಯವಸ್ಥಿತವಾಗಿ ಮಾಡಿದರೆ ಎಲ್ಲರಿಗೂ ಅನುಕೂಲ.ಅದು ಬಿಟ್ಟು ಅರ್ಧಂಬರ್ಧ ಮಾಡಿ ,ಕಾಮಗಾರಿ ವಿಳಂಬ ಮಾಡುವುದರಿಂದ ಜನರಿಗೆ ಸಮಸ್ಯೆಯೇ ಹೆಚ್ಚು.ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.
Kshetra Samachara
11/03/2022 02:28 pm