ಮುಲ್ಕಿ: ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿ ಬದಿ ಅಪಾಯಕಾರಿಯಾಗಿ ಬೆಳೆದಿರುವ ಹುಲ್ಲು ಕಟಾವು ಮಾಡಬೇಕೆಂದು ಮಾಜಿ ನ.ಪಂ. ಸದಸ್ಯ ಅಬ್ದುಲ್ ರಜಾಕ್ ಆಗ್ರಹಿಸಿದ್ದಾರೆ.
ಮುಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ಮತ್ತು ಒಳ ರಸ್ತೆಗಳ ಗ್ರಾಮೀಣ ಪ್ರದೇಶಗಳ ರಸ್ತೆ ಬದಿ ಮಾರುದ್ದದ ಹುಲ್ಲು ಬೆಳೆದಿದ್ದು, ರಸ್ತೆಗಳ ತಿರುವು ಕಾಣಿಸದೆ ಅಪಘಾತಗಳಾಗುವ ಸಾಧ್ಯತೆಯಿದೆ.
ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕುಬೆವೂರು ಕೆಂಚನಕೆರೆ ಅಪಾಯಕಾರಿ ತಿರುವಿನಲ್ಲಿ ಬಹಳಷ್ಟು ಪೊದೆಗಳು ಹಾಗೂ ಹುಲ್ಲು ಬೆಳೆದಿದ್ದು ವಿಷಜಂತುಗಳಿವೆ. ಈ ಪರಿಸರದಲ್ಲಿ ರಾತ್ರಿ ಹೊತ್ತು ದಾರಿದೀಪ ಕೂಡ ಸರಿಯಾಗಿ ಇರದಿರುವುದು ಪ್ರಯಾಣಕ್ಕೆ ಮತ್ತಷ್ಟು ತೊಂದರೆಯಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಬೆವೂರು ಕೆಂಚನಕೆರೆ ಹೆದ್ದಾರಿ ಬದಿ ಅಲ್ಲಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಕಿಲ್ಪಾಡಿ ಪಂ. ಸಭೆಯಲ್ಲಿ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಪಂ. ವ್ಯಾಪ್ತಿಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸ ಇನ್ನೂ ಆಗಿಲ್ಲ. ಕಿಲ್ಪಾಡಿ ಪಂ. ವ್ಯಾಪ್ತಿಯ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿಯ ಖಾಸಗಿ ನಿವೇಶನದಲ್ಲಿ ಕೆಲವರು ತ್ಯಾಜ್ಯ ಎಸೆಯುತ್ತಿದ್ದಾರೆ ಎಂದು ಸ್ಥಳೀಯರಾದ ಚಂದ್ರಹಾಸ ಆಳ್ವ ತಿಳಿಸಿದ್ದಾರೆ.
ಕೂಡಲೇ ಪಂಚಾಯತ್ ಹಾಗೂ ಪಿಡಬ್ಲ್ಯುಡಿ ಇಲಾಖೆ ಸೂಕ್ತ ಕ್ರಮ ಕೈಗೊಂಡು ಹೆದ್ದಾರಿ ರಸ್ತೆ ಇಕ್ಕೆಲದಲ್ಲಿ ಹುಲ್ಲು ಕಟಾವು ಮಾಡುವುದಲ್ಲದೆ, ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
02/12/2020 08:15 pm