ಉಡುಪಿ: ಮಹಿಳೆಯರು, ಯುವತಿಯರಿಗೆ ಸ್ವರಕ್ಷಣೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ. ತಮ್ಮನ್ನು ತಾವು ರಕ್ಷಿಸುವ ಕಲೆ ಕಲಿತರೆ ಹೆಣ್ಣು, ಗಂಡಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುವುದರ ಜೊತೆಗೆ ನಿರ್ಭೀತಿಯಿಂದ ಓಡಾಡಿಕೊಂಡಿರಬಹುದು.
ಇದನ್ನು ಅರಿತ ಯುವಕ ಕಾರ್ತಿಕ್ ಎಸ್. ಕಟೀಲ್ ಕರಾವಳಿಯಲ್ಲಿ ಕಮಾಲ್ ಮಾಡಿದ್ದು, ಹೆಂಗಳೆಯರಿಗೆ ಸ್ವರಕ್ಷಣೆಯ ಪಟ್ಟು ಕಲಿಸುತ್ತಿದ್ದಾರೆ.
ನೀವು ನಂಬಲೇಬೇಕು, ಇವರು ಈ ತನಕ 1.5 ಲಕ್ಷ ನಾರಿಯರಿಗೆ ಸ್ವರಕ್ಷಣೆ ಪಟ್ಟುಗಳನ್ನು ಕಲಿಸಿ ರಾಜ್ಯವನ್ನೇ ಬೆರಗುಗೊಳಿಸಿದ್ದಾರೆ. ಕಾರ್ತಿಕ್ ತಮ್ಮದೇ ಸ್ವ-ರಕ್ಷಾ ಫಾರ್ ವುಮೆನ್ ಟ್ರಸ್ಟ್ ಸ್ಥಾಪಿಸಿದ್ದು, ಇವರಿಗೆ ಸಾಥ್ ನೀಡುತ್ತಿರುವುದು ಇವರ ತಾಯಿ! ಹೌದು, ಯುವತಿಯರಿಗೆ ಕಾರ್ತಿಕ್ ಎಸ್ .ಕಟೀಲ್ ಏಕಾಂಗಿಯಾಗಿ ತರಬೇತಿ ನೀಡುತ್ತಿಲ್ಲ, ಬದಲಾಗಿ ಈ ತರಬೇತಿ ಕಾರ್ತಿಕ್ ಮತ್ತವರ ತಾಯಿ ಶೋಭಾಲತಾ ಜುಗಲ್ ಬಂಧಿಯಲ್ಲಿ ನಡೆಯುತ್ತಿದೆ.
ನೂರಾರು ಸಂಸ್ಥೆಗಳ ಲಕ್ಷಕ್ಕೂ ಅಧಿಕ ಉದ್ಯೋಗಸ್ಥ ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರಿಗೆ ಈ ಮಗ ಮತ್ತು ತಾಯಿಯ ಜೋಡಿ ತರಬೇತಿ ನೀಡಿದೆ. 60ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಸ್ವ ರಕ್ಷಣೆ ಟಿಪ್ಸ್ ಹೇಳಿಕೊಟ್ಟಿರುವ ಹೆಗ್ಗಳಿಕೆ ಇವರದ್ದು.
ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ತಿಕ್ ಅವರ ಸ್ವ ರಕ್ಷಾ ಫಾರ್ ವುಮನ್ ದೊಡ್ಡ ಬ್ರಾಂಡ್ ಆಗಿ ಬೆಳೆಯುತ್ತಿದೆ. ಒಂದು ವಿಶೇಷ ಉದ್ದೇಶ, ಸಕಾರಣ ಇಟ್ಟುಕೊಂಡು ನಾರಿಯರಿಗೆ ನಿಷ್ಠೆಯಿಂದ ಸ್ವರಕ್ಷಣೆ ಪಾಠ ಹೇಳಿಕೊಡುತ್ತಿರುವ ಈ ಅಮ್ಮ- ಮಗನ ಸೇವಾ ಕೈಂಕರ್ಯವನ್ನು ನಾವೆಲ್ಲರೂ ಪ್ರೋತ್ಸಾಹಿಸೋಣ.
Kshetra Samachara
23/09/2020 10:50 am