ಮಂಗಳೂರು: ಸಿನಿಮಾ ನಿರ್ದೇಶನದ ಅನುಭವ ಇಲ್ಲದಿದ್ದರೂ ಕನ್ನಡದಲ್ಲೊಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಹಂಬಲ ಹೊಂದಿರುವ ವಿಜಯಾ ನರೇಶ್ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಹಾರರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ರಿಯಾ' ಎಂಬ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಕಥಾಹಂದರವುಳ್ಳ ಸಿನಿಮಾ ನಿರ್ದೇಶಿಸಿದ್ದಾರೆ.
ವಿಜಯಾ ನರೇಶ್ ಆಂಧ್ರಪ್ರದೇಶದವರು. ಶಿಕ್ಷಕಿಯಾಗಿರುವ ಇವರ ಮಾತೃಭಾಷೆ ತೆಲುಗು. ಆದರೆ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿಯೇ ನಿರ್ದೇಶಿಸಬೇಕೆಂದು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅವರ ಸಿನಿಮಾ ನಿರ್ದೇಶನದ ಸ್ಪೂರ್ತಿಗೆ ಪತಿ ನರೇಶ್ ಅವರೇ ಬಂಡವಾಳ ಹೂಡಿದ್ದು, 60 ಲಕ್ಷ ರೂ. ನಿಂದ 1 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮೂಲತಃ ಮಂಗಳೂರಿನ ಸದ್ಯ ಮೈಸೂರಿನಲ್ಲಿ ವಾಸವಿರುವ ಅನನ್ಯಾ ವಿ.ಎಸ್. ಮುಖ್ಯಪಾತ್ರ ರಿಯಾ ಪಾತ್ರವನ್ನು ಮಾಡಿದ್ದಾರೆ. ನಿರ್ಮಾಪಕ ನಿರ್ದೇಶಕರನ್ನು ಹೊರತುಪಡಿಸಿ ಉಳಿದೆಲ್ಲಾ ನಟ-ನಟಿಯರು, ತಂತ್ರಜ್ಞರೆಲ್ಲರೂ ಕನ್ನಡದವರೇ ಆಗಿದ್ದಾರೆ.
ದುಬಾರೆ ಅರಣ್ಯದ ಬಳಿಯೇ ಈ ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದಲ್ಲಿ ನಾಯಕನಾಗಿ ಕಾರ್ತಿಕ್ ವರ್ಣೇಕರ್, ನಾಯಕಿಯಾಗಿ ಸಾವಿತ್ರಿ ಅಭಿನಯಿಸಿದ್ದಾರೆ. ಸುರೇಶ್ ಅಚ್ಚು ಛಾಯಾಗ್ರಹಣವಿದೆ. ಅನನ್ಯಾ, ವಿಕಾಸ್, ವಿಲಾಸ್ ಕುಲಕರ್ಣಿ, ಸುಧೀರ್, ಶ್ವೇತಾ, ಮೊದಲಾದವರು ತಾರಾಬಳಗದಲ್ಲಿದ್ದಾರೆ.
Kshetra Samachara
14/09/2022 06:30 pm