ಮಂಗಳೂರು: ಬಹುನಿರೀಕ್ಷಿತ ಕನ್ನಡ ಹಾರರ್ ಸಿನೆಮಾ ‘ಕಪೋ ಕಲ್ಪಿತಂ’ ಇದೇ ನವೆಂಬರ್ ತಿಂಗಳ 26ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಈ ಕುರಿತು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕಿ, ನಾಯಕಿ ಸುಮಿತ್ರಾ ಗೌಡ, “ಇದು ನನ್ನ ಮೊದಲ ಸಿನೆಮಾವಾಗಿದ್ದು, ಸ್ವತಃ ನಾನೇ ನಿರ್ದೇಶನ ಮಾಡಿರುತ್ತೇನೆ. ಸಿನೆಮಾವನ್ನು ಸಂಪೂರ್ಣವಾಗಿ ದಕ್ಷಿಣ ಕನ್ನಡದಲ್ಲಿಚಿತ್ರೀಕರಿಸಲಾಗಿದೆ. ಚಿತ್ರವು ಹಾರರ್ ಕಥೆಯ ಜೊತೆಗೆ ಕೌಟುಂಬಿಕ ಕಥೆಯನ್ನೂ ಹೊಂದಿದೆ” ಎಂದರು. “ಸದ್ಯ ಕಪೋ ಕಲ್ಪಿತಂ ಸಿನೆಮಾ ಕನ್ನಡದಲ್ಲಿ ತೆರೆ ಕಾಣಲಿದ್ದು, ಮುಂದಿನ ದಿನಗಳಲ್ಲಿ ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ” ಎಂದರು.
ಪ್ರೀತಂ ಮಕ್ಕಿಹಾಲಿ ನಾಯಕ ನಟನಾಗಿರುವ ಈ ಸಿನೆಮಾವು ಅಕ್ಷರ ಪ್ರೊಡಕ್ಷನ್ ಹಾಗೂ ಸವ್ಯಸಾಚಿ ಬ್ಯಾನರ್ ನಡಿ ಮೂಡಿ ಬಂದಿದೆ. ಚಿತ್ರಕ್ಕೆ ಸಾಹಿತ್ಯ, ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಗಣದೇವ್ ಕಾರ್ಕಳ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೇ, ರಮೇಶ್ ಚಿಕ್ಕೆ ಗೌಡ, ಕವಿತಾ ಕನಿಕಾ ಪೂಜಾರಿ ಜೊತೆ ಸೇರಿ ಚಿತ್ರ ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಅಮೋಘ್, ಶಿವರಾಜ್, ರಾಜೇಶ್ ಕಣ್ಣೂರು, ಗೌರೀಶ್ ಅಕ್ಕಿ ಮತ್ತಿತರರು ಅಭಿನಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಗಣದೇವ್ ಕಾರ್ಕಳ, ಶಿವರಾಜ್ ಕರ್ಕೇರಾ, ರಾಜೇಶ್ ಕಣ್ಣೂರು, ಅಮೋಘ್ ಉಪಸ್ಥಿತರಿದ್ದರು.
Kshetra Samachara
18/11/2021 06:47 pm