ಬೆಂಗಳೂರು/ಕುಂದಾಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 22ರಿಂದ 24ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸುಮಾರು ಹತ್ತು ದಿನಗಳಿಂದ ಬಿಡುವು ಪಡೆದಿದ್ದ ಮಳೆ ಮತ್ತೆ ಶುರುವಾಗುವ ಮುನ್ಸೂಚನೆ ನೀಡಿದೆ. ಅಲ್ಲದೇ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಕೋಲಾರದಲ್ಲಿ ಆ.23ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಈ ವರ್ಷ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು ರಾಜ್ಯದಾದ್ಯಂತ ಭಾರೀ ಅನಾಹುತಗಳು ಸಂಭವಿಸಿದ್ದವು. ಇದರ ಬೆನ್ನಿಗೇ ವಿರಾಮ ಘೋಷಿಸಿದ್ದ ಮಳೆ ಮತ್ತೆ ಚುರುಕುಗೊಳ್ಳುವ ಸೂಚನೆ ಕರಾವಳಿಗರಿಗೆ ಆತಂಕ ಸೃಷ್ಟಿಸಿದೆ. ಅಲ್ಲದೇ ಮೀನುಗಾರಿಕೆಯನ್ನೇ ನಂಬಿ ಬದುಕುವ ಮೀನುಗಾರ ಕುಟುಂಬಗಳು ಕಂಗಾಲಾಗಿವೆ.
Kshetra Samachara
21/08/2022 04:30 pm