ಕಾರ್ಕಳ : ತಾಲೂಕಿನ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಜರುಗಿತು.
ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ. ಪಿ .ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಇಂದು ಕೃಷಿಯ ಜೊತೆಗೆ ಕೇವಲ ಉಪಕಸುಬಾಗಿ ಉಳಿಯದೇ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿ ನೆಮ್ಮದಿಯ ಬದುಕನ್ನು ನೀಡಿದೆ. ಉಡುಪಿ ಜಿಲ್ಲೆಯ ಹೈನುಗಾರ ಸದಸ್ಯರ ನಿರಂತರ ಪರಿಶ್ರಮದಿಂದ ಸಹಕಾರಿ ಹಾಲು ಒಕ್ಕೂಟ , ಕರ್ನಾಟಕ ರಾಜ್ಯದ 16 ಒಕ್ಕೂಟಗಳಲ್ಲಿ ಹಾಲು ಉತ್ಪಾದಕರು ಡೈರಿಗೆ ನೀಡುವ ಹಾಲಿಗೆ ಗರಿಷ್ಠ ಬೆಲೆಯನ್ನು ನೀಡುವುದರ ಜೊತೆಗೆ , ರಾಷ್ಟ್ರಮಟ್ಟದಲ್ಲಿಯೇ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಣೂರು ಹಾಲು ಉತ್ಪಾದಕರ ಸಂಘವು ಗ್ರಾಮದ 23 ಸಂಘ - ಸಂಸ್ಥೆಗಳ ಸಹಭಾಗಿತ್ವದಿಂದ 3 ವರ್ಷಗಳ ಹಿಂದೆ ಆಯೋಜಿಸಿದ ಗೋ- ಸಮ್ಮೇಳನವು ಒಕ್ಕೂಟ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಮಾದರಿಯಾಗಿ, ಮೂಡಿಬಂದಿದ್ದು, ಈ ವರ್ಷವೂ ಗೋ - ಸಮ್ಮೇಳನವನ್ನು ಆಯೋಜಿಸಿದ ರೆ ಒಕ್ಕೂಟದ ವತಿಯಿಂದ ಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಕಡಂದಲೆ ಮತ್ತು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವಿರಾಜ ಉಡುಪ ಹಾಗೂ ಸಂಘದಲ್ಲಿ 3 ವರ್ಷ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಅಬ್ದುಲ್ ಸಮೀರ್ , ಮೇಲ್ವಿಚಾರಕರಾದ ಶಿವಕುಮಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. 2021 - 22 ನೇ ಸಾಲಿನಲ್ಲಿ ಸಂಘಕ್ಕೆ ಗರಿಷ್ಠ ಹಾಲು ಹಾಕಿದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಒಕ್ಕೂಟದ ನೂತನ ಮೇಲ್ವಿಚಾರಕರಾದ ಶಿವಕುಮಾರ್ ಸಂಘದ ಲೆಕ್ಕಪರಿಶೋಧನಾ ವರದಿ ಮಂಡಿಸಿದರರು. ಪಶುವೈದ್ಯರಾದ ಡಾಕ್ಟರ್ ಶೀತಲ್ ಕುಮಾರ್ ರವರು ಹಸು ಸಾಕಣೆ ,ಕರುವಿನ ಪೋಷಣೆ, ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡಿ, ಸದಸ್ಯರ ಜೊತೆ ಸಂವಾದ ನಡೆಸಿದರು.
ಕಾರ್ಯದರ್ಶಿ ಸಂತೋಷ್ ಶೆಟ್ಟಿ, ನಿರ್ದೇಶಕರಾದ ಜಯ ಶೆಟ್ಟಿಗಾರ್, ಜ್ಞಾನದೇವ, ಸಾಣೂರು ಪಂಚಾಯತ್ ಅಧ್ಯಕ್ಷರಾದ ಸುಜಾತಾ ಶೆಟ್ಟಿ , ಸಂಘದ ನಿರ್ದೇಶಕರಾದ ಕೊರಗಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ರೀಧರ ಸಮಗಾರ, ನಿರ್ದೇಶಕರುಗಳಾದ ಜಯ ಮೂಲ್ಯ, ವಿಶ್ವನಾಥ ಶೆಟ್ಟಿಗಾರ್, ಸಂಜೀವಿ, ರಾಯಲ್ ನರೋನ್ನ, ಸಂಘದ ಸಿಬ್ಬಂದಿ ನೂತನ ಕೃತಕ ಗರ್ಭಧಾರಣ ಕಾರ್ಯಕರ್ತರಾದ ಶ್ರೀ ಗುರುಪ್ರಸಾದ್, ಸ್ವಚ್ಛತಾ ಕಾರ್ಯಕರ್ತರಾದ ಶ್ರೀಮತಿ ವಿಮಲಾರವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಯಶೋಧ ಆರ್ ಸುವರ್ಣ ಸ್ವಾಗತಿಸಿ ,ನಿರ್ದೇಶಕರಾದ ಸೋಮಶೇಖರ್ ವಂದಿಸಿದರು. ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
09/09/2022 08:17 pm