ಉಡುಪಿ: ಮೊನ್ನೆ ಬೀಸಿದ ಚಂಡಮಾರುತದ ಗಾಳಿಮಳೆಗೆ ಉಡುಪಿ ಜಿಲ್ಲೆಯ ಎಕರೆಗಟ್ಟಲೆ ಕಲ್ಲಂಗಡಿ ಕೃಷಿ ನಾಶವಾಗಿದೆ. ಕೃಷಿಕರ ಫಸಲಿನ ಕನಸು ಫೆಂಗಲ್ ಸೈಕ್ಲೋನ್ ಮಳೆಗೆ ಕಮರಿ ಹೋಗಿವೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹರ್ತಟ್ಟು ಗ್ರಾಮದಲ್ಲಿ ಇನ್ನೊಂದು ತಿಂಗಳಿಗೆ ಫಸಲು ನೀಡಬೇಕಿದ್ದ ಕಲ್ಲಂಗಡಿ ಬೆಳೆಗೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಕಲ್ಲಂಗಡಿ ಗದ್ದೆಯಲ್ಲೇ ಕೊಳೆತು ಹೋಗುವ ಆತಂಕ ರೈತರಿಗೆ ಎದುರಾಗಿದೆ. ಈ ಬಾರಿ ಮಳೆಗಾಲದಲ್ಲಿ ನಿರೀಕ್ಷೆಗಿಂತ ಜಾಸ್ತಿ ಮಳೆಯಾಗಿತ್ತು. ಇದರಿಂದ ಕುಂದಾಪುರದ ಭಾಗದ ರೈತರು ಕಡಿಮೆ ಭತ್ತ ಬೆಳೆ ಮಾಡಿ ಉಪಬೆಳೆಗೆ ಹೆಚ್ಚು ಒತ್ತು ನೀಡಿದ್ದರು. ಅದರಂತೆ ಕೋಟ ಗಿಳಿಯಾರು ಗ್ರಾಮದ ಹರ್ತಟ್ಟುವಿನ ಶ್ರೀಧರ ಗಾಣಿಗ ಅವರು ಕಲ್ಲಂಗಡಿ ಬೆಳೆಯನ್ನು ಬೆಳೆಸಿದ್ದರು. ಕಲ್ಲಂಗಡಿ ಬೆಳೆಗೆ ಲಕ್ಷಾಂತರ ರೂಪಾಯಿ ಬಂಡವಾಳವನ್ನೂ ಹಾಕಿದ್ದರು. ಇನ್ನೇನು ಒಂದು ತಿಂಗಳಲ್ಲಿ ಬೆಳೆ ಫಸಲು ಕೊಡುವ ಸಮಯದಲ್ಲಿಯೇ ಬಂದ ಫೆಂಗಲ್ ಸೈಕ್ಲೋನ್ ರೈತರ ಕನಸನ್ನು ನುಚ್ಚುನೂರು ಮಾಡಿದೆ.
ಕೇವಲ ಎರಡು ದಿನ ಚಂಡಮಾರುತದ ಪ್ರಭಾವದಿಂದ ಆದ ಮಳೆಯಿಂದಾಗಿ ಗದ್ದೆಗೆ ನೀರು ನುಗ್ಗಿ ತೇವಾಂಶ ಜಾಸ್ತಿಯಾಗಿದೆ. ಇದರಿಂದ ಚಿಗುರಿದ ಹೂಗಳು ಕೊಳೆತು ಹೋಗಿವೆ. ಮೂರೆಕರೆಯಲ್ಲಿ ಮಾಡಿದ ಕಲ್ಲಂಗಡಿ ಬೆಳೆಯಲ್ಲಿ ಅರ್ಧ ಎಕರೆಯಷ್ಟು ಲಾಭ ಸಿಗುವ ಸಾಧ್ಯತೆಯೂ ಕಡಿಮೆ ಅಂತಾರೆ ಕೃಷಿಕರು. ಸಂಬಂಧಪಟ್ಟ ಇಲಾಖೆ ಕೃಷಿಕರ ನೆರವಿಗೆ ಧಾವಿಸಬೇಕಿದೆ.
Kshetra Samachara
05/12/2024 01:44 pm