ವರದಿ: ರಹೀಂ ಉಜಿರೆ
ಬಾರ್ಕೂರು: ಕರಾವಳಿಯಲ್ಲಿ ಸೌತೆ ಬೆಳೆ ಕಡಿಮೆ. ಆದರೂ ಇಲ್ಲಿನ ಕೃಷಿಕರು ಇದನ್ನು ಉಪಬೆಳೆಯಾಗಿ ಬೆಳೆಯುತ್ತಾರೆ. ಆದರೆ ಈ ಬಾರಿ ಸೌತೆ ದರ ಗಣನೀಯವಾಗಿ ಇಳಿದ ಪರಿಣಾಮ ಇಲ್ಲಿನ ರೈತರು ಬೆಳೆದ ಸೌತೆಯನ್ನು ಗದ್ದೆಯಲ್ಲಿಯೇ ಬಿಟ್ಟಿದ್ದಾರೆ.
ಬಾರಕೂರು ಭಾಗದಲ್ಲಿ ರೈತರು ಬೆಳೆದ ಹಲವಾರು ಹೆಕ್ಟೇರ್ ಸೌತೆ ಗದ್ದೆಯಲ್ಲೇ ಉಳಿದಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸಿ ಬಿತ್ತನೆ ಮಾಡಿ ನೀರು ಹಾಯಿಸಿ ಈ ಬೆಳೆ ತೆಗೆಯಬೇಕು. ಇಷ್ಟೆಲ್ಲ ಖರ್ಚು ಮಾಡಿ ಉತ್ತಮ ಫಸಲು ಬಂದರೂ ಸೌತೆ ಮಾರುಕಟ್ಟೆಯಲ್ಲಿ ಕೆಜಿಗೆ 3 ರೂನಂತೆ ಕೇಳುತ್ತಾರೆ. ಹೀಗಾಗಿ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ತಲುಪಿಸುವ ಮನಸ್ಸೂ ಇಲ್ಲಿನ ಕೃಷಿಕರಿಗಿಲ್ಲ.
ಹಿಂದೆಲ್ಲ ಸೌತೆಕಾಯಿಯನ್ನು ವರ್ಷ ಗಟ್ಟಲೆ ಮನೆಯಲ್ಲಿ ಜೋತುಹಾಕುತ್ತಿದ್ದರೂ ಹಾಳಾಗುತ್ತಿರಲಿಲ್ಲ. ಈಗ ಸೌತೆ ಕಟಾವು ಮಾಡಿ ಕೆಲವೇ ದಿನದಲ್ಲಿ ಕೊಳೆಯುವ ಸಂಭವ ಜಾಸ್ತಿ.ಹೀಗಾಗಿ ರೈತರು ಹಾಕಿದ ಹಣ ಸಿಗದೆ ಆರ್ಥಿಕವಾಗಿ ತತ್ತರಿಸುವಂತಾಗಿದೆ. ಈ ತಿಂಗಳು ನಾಗಮಂಡಲ, ಮದುವೆ ಇನ್ನಿತರ ಶುಭಕಾರ್ಯಗಳು ಕಡಿಮೆ ಇದ್ದಿದ್ದರಿಂದ ಬೇಡಿಕೆ ಇಳಿಕೆಯಾಗಲು ಇನ್ನೊಂದು ಕಾರಣ. ರೈತರು ಬೆಳೆದ ಬೆಳೆಗೆ ಸರಕಾರ ಬೆಂಬಲ ಬೆಲೆ ನೀಡುವಂತಾಗಬೇಕು ಅಥವಾ ಖರೀದಿಸುವಂತಾಗಬೇಕು ಎನ್ನುವುದು ರೈತರ ಬಯಕೆಯಾಗಿದೆ.
Kshetra Samachara
08/03/2022 10:23 am