ಗುರುಪುರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ರಿಂದ 5 ಎಕರೆಯ ಒಳಗೆ ಕೃಷಿ ಮಾಡುತ್ತಿರುವ ಅನೇಕ ರೈತರು ಇದ್ದಾರೆ. ಆದರೆ ಸರಕಾರದ ಕಂದಾಯ ಇಲಾಖೆಯ ನಿಯಮದ ಪ್ರಕಾರ ಇವರು ಸಣ್ಣ ರೈತರ ವ್ಯಾಪ್ತಿಯಲ್ಲಿ ಬರದೇ ಇದ್ದ ಕಾರಣ ಸರಕಾರದ ಪ್ರಮಾಣಪತ್ರ ಸಿಗುತ್ತಿರಲಿಲ್ಲ.
ಇದರಿಂದ ಸರಕಾರದ ಕೃಷಿ ಇಲಾಖೆಯ ವಿವಿಧ ಸೌಲಭ್ಯಗಳಿಂದ ಈ ರೈತವರ್ಗ ವಂಚಿತವಾಗುತ್ತಿತ್ತು. ಈ ವಿಷಯ ಶಾಸಕರಾದ ಡಾ.ಭರತ್ ಶೆಟ್ಟಿ ಗಮನಕ್ಕೆ ಬಂದ ತಕ್ಷಣ ಅವರು ಮುಖ್ಯಮಂತ್ರಿಗಳೊಂದಿಗೆ, ಕಂದಾಯ ಸಚಿವರೊಂದಿಗೆ, ಕೃಷಿ ಸಚಿವರೊಂದಿಗೆ, ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, 5 ಎಕರೆಯೊಳಗೆ ಭೂಮಿ ಹೊಂದಿರುವ ರೈತಬಂಧುಗಳು ಸೌಲಭ್ಯದಿಂದ ವಂಚಿತರಾಗಬಾರದು ಎಂದು ಮನವರಿಕೆ ಮಾಡಿದ ಪರಿಣಾಮ ನಿಯಮದಲ್ಲಿ ಮಾರ್ಪಾಡು ತರಲಾಗಿದೆ.
ಶಾಸಕ ಡಾ.ಭರತ್ ಶೆಟ್ಟಿಯವರ ಪ್ರಯತ್ನದಿಂದ ರಾಜ್ಯದ ಅಸಂಖ್ಯಾತ ಕೃಷಿಬಂಧುಗಳಿಗೆ ಪ್ರಯೋಜನವಾದಂತೆ ಆಗಿದೆ. ಗುರುಪುರ ರೈತ ಕೇಂದ್ರದಲ್ಲಿ ಸುಮಾರು 60 ರೈತ ಫಲಾನುಭವಿಗಳಿಗೆ ಕೃಷಿ ಇಲಾಖೆಯ ಪೈಪ್ ಹಾಗೂ ಸ್ಪಿಂಕ್ಲರ್ ಸೆಟ್ ವಿತರಿಸಲಾಯಿತು.
ಈ ಸಂದರ್ಭ ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್,ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುರುಪುರ, ಮಾಧವ ಕಾಜಿಲ, ಪ್ರವೀಣ್ ಶೆಟ್ಟಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
02/01/2022 03:27 pm