ಉಡುಪಿ: ಜಿಲ್ಲೆಯಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗಳನ್ನೂ ಹಾಗೂ ಮೀನುಗಾರಿಕಾ ಬೋಟ್ ಹಾಗೂ ಪರಿಕರಗಳನ್ನು ವಿಮಾ ವ್ಯಾಪ್ತಿಗೆ ತರುವಂತೆ ಪ್ರೋತ್ಸಾಹಿಸಬೇಕು. ಇದರಿಂದ ಪ್ರಾಕೃತಿಕ ವಿಕೋಪದಿಂದಾಗುವ ವೈಯಕ್ತಿಕ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ಪ್ರಾಕೃತಿಕ ವಿಕೋಪ ಹಾಗೂ ಮಳೆ ಹಾನಿಯ ಅಧ್ಯಯನಕ್ಕೆ ಆಗಮಿಸಿ, ಉಡುಪಿ ನಗರದ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಾದ ಒಟ್ಟು ನಷ್ಟದ ಅಂಕಿಅಂಶಗಳ ವಿವರಗಳನ್ನು ಪಡೆದು ಮಾತನಾಡುತಿದ್ದರು.
ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆ ಸೇರಿದಂತೆ ಬೆಳೆವಿಮೆಗೆ ಸರಕಾರವು ಪ್ರೀಮಿಯಂ ಹಣವನ್ನು ಶೇ.98ರಷ್ಟು ತುಂಬುತ್ತಿದ್ದು, ಬಾಕಿ ಉಳಿದ ಶೇ.2ರಷ್ಟು ಹಣವನ್ನು ರೈತರು ಪಾವತಿಸಿದ್ದಲ್ಲಿ ರೈತರು ತಮಗಾದ ಬೆಳೆ ನಷ್ಠ ಪರಿಹಾರವನ್ನು ಪಡೆಯಬಹುದು.ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ಸೂಚಿಸಿದರು.
ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕಡ್ಡಾಯವಾಗಿ ವಿಮೆಯನ್ನು ಮಾಡಿಸಲು ಮುಂದಾಗಬೇಕು. ವಿಮೆ ನೋಂದಣಿಯಿಂದ ಬೋಟ್‌ಗಳಿಗೆ ನಷ್ಟ ಉಂಟಾದಾಗ ಹೆಚ್ಚಿನ ಪರಿಹಾರವನ್ನು ಪಡೆಯಲು ಸಾದ್ಯವಾಗುತ್ತದೆ ಎಂದರು.
ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಸಮುದಾಯದ ಜನರೇ ಹೆಚ್ಚಾಗಿ ಭಾಗಿಯಾಗುವುದರೊಂದಿಗೆ ಹೆಚ್ಚಿನ ಅನಾಹುತಗಳನ್ನು ತಪ್ಪಿಸುತ್ತಾರೆ. ಇವರೊಂದಿಗೆ ಜಿಲ್ಲಾಡಳಿತವೂ ಸಹ ಕ್ಲಿಷ್ಟಕರ ರಕ್ಷಣಾ ಕಾರ್ಯದಲ್ಲಿ ರಕ್ಷಣಾ ಸಾಮಗ್ರಿಯೊಂದಿಗೆ ತ್ವರಿತವಾಗಿ ಕಾರ್ಯ ಕೈಗೊಳ್ಳಬೇಕು ಎಂದರು.
Kshetra Samachara
09/09/2022 10:21 am