ಉಡುಪಿ: ಸೈರಾಟ್, ಫ್ಯಾಂಡ್ರಿಯಂತಹ ಯಶಸ್ವೀ ಮರಾಠಿ ಸಿನಿಮಾಗಳ ನಿರ್ದೇಶಕ ನಾಗರಾಜ ಮಂಜುಳೆ, ರಾಷ್ಟ್ರಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳ ನಿರ್ದೇಶಕಿ ಫರಹಾ ಖಾತೂನ್ ಮತ್ತು ಕನ್ನಡದ ಹಿರಿಯ ಚಿಂತಕ ಪ್ರೊ. ರಹಮತ್ ತರೀಕೆರೆ ಅವರು ಎಪ್ರಿಲ್ 16ರಂದು ಉಡುಪಿಯಲ್ಲಿ 'ಕರಾವಳಿ ಕಟ್ಟು' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್, ತಲ್ಲೂರು ಇದರ ಆಡಳಿತ ಟ್ರಸ್ಟಿ ಸುರೇಶ ತಲ್ಲೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ರಸ್ಟಿನ ಕರಾವಳಿ ಕಟ್ಟು ಚಟುವಟಿಕೆಗಳ ಅಡಿಯಲ್ಲಿ ನಡೆಯುತ್ತಿರುವ “ತಲ್ಲೂರು ನುಡಿಮಾಲೆ” ಉಪನ್ಯಾಸ ಸರಣಿಗಳ ಅಡಿಯಲ್ಲಿ 2022ನೇ ಸಾಲಿನ ನುಡಿಮಾಲೆಗೆ ಹಂಪಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಚಿಂತಕ ಪ್ರೊ|ರಹಮತ್ ತರೀಕೆರೆ ಅವರು “ಬಹುತ್ವದ ಬಹುಮುಖಗಳು” ಉಪನ್ಯಾಸ ನೀಡಲಿದ್ದಾರೆ.
ಉಡುಪಿಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮಣಿಪಾಲ್ ಇನ್ ಹೊಟೇಲಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮರಾಠಿಯ ಪ್ರಸಿದ್ಧ ಚಿತ್ರ ನಿರ್ದೇಶಕರೂ, ಕವಿಯೂ ಆಗಿರುವ ನಾಗರಾಜ ಮಂಜುಳೆ ಅವರ ಮರಾಠಿ ಕವನಸಂಕಲನ “ಉನ್ಹಾಚ್ಯಾ ಕಟಾವಿರುದ್ಧ” ದ ಕನ್ನಡ ಅನುವಾದ “ಬಿಸಿಲಿನ ಷಡ್ಯಂತ್ರದ ವಿರುದ್ಧ” ಸಂಕಲನ ಬಿಡುಗಡೆ ಆಗಲಿದೆ. ಕನ್ನಡದ ಕವಿ, ಚಿತ್ರಕತಾ ಲೇಖಕ ಸಂವರ್ತ ಸಾಹಿಲ್ ಅನುವಾದಿಸಿರುವ ಈ ಸಂಕಲನವನ್ನು ಗೋವಾದ ಸಹಿತ್ ಪ್ರಕಾಶನ ಪ್ರಕಟಿಸಿದ್ದು, ಅಂದು ನಿರ್ದೇಶಕಿ ಫರಹಾ ಖಾತೂನ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಉಪನ್ಯಾಸಕರಾಗಿರುವ ಕವಿ, ಅನುವಾದಕ ಡಾ| ಕಮಲಾಕರ ಭಟ್ ಪುಸ್ತಕದ ಕುರಿತು ಮಾತನಾಡುತ್ತಾರೆ.
ಪುಸ್ತಕ ಬಿಡುಗಡೆಯ ಬಳಿಕ, ಮೂಲ ಕವಿ ನಾಗರಾಜ ಮಂಜುಳೆ ಮತ್ತು ಅನುವಾದಕ ಸಂವರ್ತ ಸಾಹಿಲ್ ಅವರ ನಡುವೆ ಸಂವಾದ ನಡೆಯಲಿದೆ.
ಅರ್ಧ ದಿನದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವವರು ತಮ್ಮ ಉಚಿತ ಪಾಸುಗಳಿಗಾಗಿ 9538855776 ನಂಬರಿಗೆ ಎಸ್ ಎಂ ಎಸ್ ಸಂದೇಶ ಕಳುಹಿಸಬಹುದು ಎಂದು ಟ್ರಸ್ಟಿನ ಪ್ರಕಟಣೆ ತಿಳಿಸಿದೆ.
Kshetra Samachara
14/04/2022 07:50 pm