ಕಾರ್ಕಳ: ಮಿಯ್ಯಾರು ಗ್ರಾಮದ ಕುಂಟಿಬೈಲು ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಕಾರೊಂದು ಹೊಂಡ ತಪ್ಪಿಸುವ ಭರದಲ್ಲಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡಿವೆ.
ಬಜಗೋಳಿಯ ವೈದ್ಯರೊಬ್ಬರು ಗುರುವಾರ ಬಜಗೋಳಿಯಿಂದ ಕಾರ್ಕಳಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಕುಂಟಿಬೈಲು ತಿರುವಿನಲ್ಲಿರುವ ರಸ್ತೆಯಲ್ಲಿನ ಬೃಹತ್ ಅಪಾಯಕಾರಿ ಹೊಂಡವನ್ನು ತಪ್ಪಿಸುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಾಯಕಾರಿ ಹೊಂಡದಿಂದಾಗಿ ಸರಣಿ ಅಪಘಾತ:
ಕುಂಟಿಬೈಲಿನಲ್ಲಿರುವ ಈ ತಿರುವಿನಲ್ಲಿ ಅಪಾಯಕಾರಿ ಹೊಂಡವೊಂದಿದ್ದು ಇದೇ ಕಾರಣದಿಂದಾಗಿ ಇಲ್ಲಿ ಪದೇಪದೇ ಸರಣಿ ಅಪಘಾತಗಳಾಗುತ್ತಿದೆ.ಇತ್ತೀಚೆಗೆ ಈ ಹೊಂಡಕ್ಕೆ ಮಣ್ಣು ತುಂಬಿಸಿ ದುರಸ್ತಿ ಮಾಡಿದ್ದರೂ ಮಳೆಯಿಂದಾಗಿ ಮಣ್ಣು ಕಿತ್ತು ಹೋಗಿತ್ತು.ಇದೀಗ ಬೃಹತ್ ಗುಂಡಿಯಿಂದ ಮತ್ತೆ ಅಪಘಾತ ಸಂಭವಿಸಿದ್ದು,ಪದೇಪದೇ ಅಪಘಾತ ನಡೆಯುತ್ತಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಶಾಶ್ವತ ಪರಿಹಾರಕ್ಕೆ ಮುಂದಾಗದೇ ತೇಪೆ ಹಚ್ಚುವ ಕೆಲಸ ನಡೆಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪದೇಪದೇ ಅಪಾಯಕ್ಕೆ ಅಹ್ವಾನ ಕೊಡುವ ಈ ಬೃಹತ್ ಗುಂಡಿಗೆ ಇನ್ನೆಷ್ಟು ಬಲಿಯಾಗಬೇಕು ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
Kshetra Samachara
29/09/2022 10:42 pm