ಶಿರ್ವ: ಮಹಿಳೆಯೊಂದಿಗೆ ಉಡಾಫೆಯಿಂದ ವರ್ತಿಸಿ, ಹಲ್ಲೆಗೆ ಯತ್ನಿಸಿದ ಆರೋಪದ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬೆಳ್ಳೆಯ ತೋಕೋಳಿ ನಿವಾಸಿ ಲಕ್ಷ್ಮೀ(54) ಎಂಬವರ ಬೆಳ್ಳೆ ಗ್ರಾಮದ ಸರ್ವೇ ನಂಬ್ರ 319/13ರಲ್ಲಿ ಇರುವ ಜಾಗದ ಎದುರು ಕಲ್ಲುಕೋರೆಯ ದೊಡ್ಡ ಗುಂಡಿ ಇದ್ದು, ಜ.30ರಂದು ಲಕ್ಷ್ಮೀ ತನ್ನ ಮಗಳೊಂದಿಗೆ ಜಾಗಕ್ಕೆ ಬಂದಾಗ ಎದುರಿನ ಗುಂಡಿಯಲ್ಲಿ ಸಂಪೂರ್ಣ ಕೊಳೆತ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಮುಚ್ಚಿ ಹಾಕಿರುವುದು ಕಂಡುಬಂದಿತ್ತು.
ಜ.31ರಂದು ಗಮನಿಸಿದಾಗ ತ್ಯಾಜ್ಯದ ಮೇಲೆ ಒಂದೆರಡು ಲೋಡು ಮಣ್ಣು ಹಾಕಿ ಮುಚ್ಚಲಾಗಿತ್ತು. ತ್ಯಾಜ್ಯ ಹಾಕಿದವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ಮತ್ತು ಅವರೊಂದಿಗಿದ್ದ ಇನ್ನಿತರರು ಹಾಕಿರುವುದಾಗಿ ತಿಳಿದು ಬಂತು. ಬಳಿಕ ಲಕ್ಷ್ಮೀ ಬೆಳ್ಳೆ ಗ್ರಾಪಂಗೆ ತೆರಳಿ ಲಿಖಿತವಾಗಿ ಮನವಿ ನೀಡಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ತಿಳಿಸಿದ್ದರು. ಆದರೂ ಬೆಳ್ಳೆ ಗ್ರಾಪಂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಲಕ್ಷ್ಮೀ ದೂರಿದ್ದಾರೆ.
ನಂತರ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇತ್ಯರ್ಥಪಡಿಸುವ ಬಗ್ಗೆ ನೋಟಿಸ್ ನೀಡಿ ಕರೆಯಿಸಿಕೊಂಡು ಲಕ್ಷ್ಮೀ ಅವರಿಗೆ ಮಾತನಾಡಲು ಅವಕಾಶ ನೀಡದೆ ಅವಮಾನ ಮಾಡಲಾಗಿದೆ. ಇದೀಗ ಲೋಡುಗಟ್ಟಲೆ ತ್ಯಾಜ್ಯ ಸುರಿದಿರುವುದರಿಂದ ಲಕ್ಷ್ಮೀ ಅವರಿಗೆ ಆ ಸ್ಥಳದಲ್ಲಿ ಬಾವಿ ತೋಡಲು ಅಸಾಧ್ಯವಾಗಿದ್ದು, ಸುತ್ತಮುತ್ತಲಿನ ಬಾವಿಯ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರ ಬಳಿ ಮಾತನಾಡಿದಾಗ ಉಡಾಫೆಯಿಂದ ವರ್ತಿಸಿ, ತನ್ನ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಕೆ ಒಡ್ಡಿರುವುದಾಗಿ ಲಕ್ಷ್ಮೀ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
10/06/2022 06:15 pm