ಕಾರ್ಕಳ: ಕಾರ್ಕಳ ಬೈಪಾಸ್ ರಸ್ತೆಯಲ್ಲಿರುವ ಟಿಎಂಎ ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡವೇರ್ ಅಂಗಡಿಯಿಂದ ರೂಪಾಯಿ 1.45 ಲಕ್ಷ ನಗದು ಹಣವನ್ನು ಕಳವು ಮಾಡಿದ ಆರೋಪಿಗಳ ಪೈಕಿ ಮಹಮ್ಮದ್ ಇಕ್ಬಾಲ್,( 54 ವರ್ಷ), ತಂದೆ: ಅಬ್ದುಲ್ ಜಬ್ಬಾರ್, ವಾಸ: ವಿಜಯನಗರ, ಹಾಸನ, ಹಾಸನ ತಾಲೂಕು, ಹಾಸನ ಜಿಲ್ಲೆ ಎಂಬಾತನನ್ನು ಮಡಿಕೇರಿಯಲ್ಲಿ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಹಮದ್ ಇಕ್ಬಾಲ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾರ್ಗಲ್‌ನ ವಾಸಿಗಳಾದ ತನ್ನ ಭಾವನೆಂಟ ಇಬ್ರಾಹಿಂ ಹಾಗೂ ಮಾವ ನೂರ ಎಂಬಾತನ ಜತೆಗೆ ಜೂ 2 ರಂದು ಕಾರ್ಕಳ ಬೈಪಾಸ್ ರಸ್ತೆಯಲ್ಲಿ ಹಾರ್ಡ್‌ವೇರ್ ಅಂಗಡಿಯಿಂದ ಹಣವನ್ನು ಕಳವು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಕಳವು ಮಾಡಿದ ಹಣದಲ್ಲಿ ಭಾಗಶಃ ಹಣವನ್ನು ಆರೋಪಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಕಾರ್ಗಲ್‌ನ ನೂರ ಎಂಬಾತನನ್ನು ಬಂಧಿಸಲಾಗಿದ್ದು ಆತ ಉಡುಪಿ ಜೈಲಿನಲ್ಲಿದ್ದಾನೆ. ಇನ್ನೋರ್ವ ಆರೋಪಿ ಇಬ್ರಾಹಿಂ ಕಾರ್ಗಲ್ ತಲೆಮರೆಸಿಕೊಂಡಿರುತ್ತಾನೆ. ಆರೋಪಿ ಇಕ್ಬಾಲ್ ಕುಖ್ಯಾತ ಕಳ್ಳನಾಗಿದ್ದು ಈತನ ಮೇಲೆ ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಹಾಗೂ ಇನ್ನು ಕೆಲವು ಜಿಲ್ಲೆಗಳ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹಾಕೆ ಅಕ್ಷಯ್ ಮಚೀಂದ್ರ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಎಸ್ ಟಿ ಸಿದ್ಧಲಿಂಗಯ್ಯ ರವರ ನಿರ್ದೇಶನದಂತೆ, ಕಾರ್ಕಳ ಉಪ-ವಿಭಾಗದ ಡಿ ವೈ ಎಸ್ ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿ ಎಸ್ ಐ ಪ್ರಸನ್ನ ಕುಮಾರ್ ಮತ್ತು ತನಿಖಾ ಎಸ್ ಐ ದಾಮೋದರ್, ಎ ಎಸ್ ಐ ರಾಜೇಶ್ ಪಿ, ಪಿ ಸಿ ಘನಶ್ಯಾಮ್, ಸಿದ್ಧರಾಯ, ರವೀಂದ್ರ ಮತ್ತು ಆನಂದ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
Kshetra Samachara
22/08/2022 07:22 pm