ಬೈಂದೂರು: ಮನೆಯಲ್ಲಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಾಡಿಗೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಕಾರು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ನಾಗರಾಜ (23) ಪಡುವರಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕಾರು ಚಾಲಕನಾಗಿ ದುಡಿಯುತ್ತಿದ್ದರು. ಅ.12ರಂದು ತಾಯಿಯಲ್ಲಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಾಡಿಗೆ ಇದೆ ಎಂದು ಹೇಳಿ ಹೋಗಿದ್ದು, ಅ.14 ರಂದು ಬೆಳಿಗ್ಗೆ ತಾಯಿಗೆ ಕರೆ ಮಾಡಿ ತಾನು ಧರ್ಮಸ್ಥಳದಲ್ಲಿ ಇದ್ದೇನೆ ಸಂಜೆ ಬರುವುದಾಗಿ ತಿಳಿಸಿದ್ದರು.
ಆದರೆ ಗುರುವಾರ ಮಧ್ಯಾಹ್ನ ಮೃತನ ಸಹೋದರ ಮಣಿಕಂಠ ಅವರಿಗೆ ಸ್ನೇಹಿತನೊಬ್ಬನಿಂದ ನಾಗರಾಜ ಅವರು ಶಿರೂರು ಗ್ರಾಮದ ಸಾತನಗುಡ್ಡೆ ಎಂಬಲ್ಲಿ ಶಿರೂರು ತೂದಳ್ಳಿಗೆ ಹೋಗುವ ರಸ್ತೆ ಬದಿ ಕಾರು ನಿಲ್ಲಿಸಿ, ವಿಷ ಸೇವಿಸಿ ಮೃತಪಟ್ಟಂತೆ ಕಂಡು ಬರುತ್ತಿದೆ ಎಂದು ತಿಳಿಸಿದ್ದರು. ನಾಗರಾಜ ಯಾವುದೋ ಕಾರಣಕ್ಕೆ ನೊಂದು ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಕಂಠ ಅವರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
16/10/2020 05:40 pm