ಉಡುಪಿ : ತೆಂಗಿನ ಬೆಳೆಯಲ್ಲಿನ ಪ್ರಮುಖ ಕೀಟ ರುಗೋಸ್ ಸುರುಳಿಯಾಕಾರದ ಬಿಳಿನೊಣದ ಹಾನಿಯ ಲಕ್ಷಣ ಮತ್ತು ಹತೋಟಿ ಕ್ರಮಗಳು ಈ ಕೆಳಗಿನಂತಿವೆ. ಬಿಳಿ ನೊಣ ಹಾನಿಯ ಲಕ್ಷಣಗಳು: ಮರಿಗಳು ಹಾಗೂ ಪ್ರೌಢ ಕೀಟಗಳು ಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಆದ್ದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗುತ್ತವೆ. ಮರಿಹಂತಗಳು ಸಿಹಿಯಾದ ಜೇನಿನ ತರಹದ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಎಲೆಗಳಲ್ಲಿ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ.
ಹತೋಟಿ ಕ್ರಮಗಳು: ಬಾದಿತ ಗಿಡಗಳ ಎಲೆಗಳನ್ನು ಕಿತ್ತು ಸುಡಬೇಕು. ಹಳದಿ ಜಿಗುಟಾದ ಆಕರ್ಷಕ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್‌ಗೆ ಹರಳೆಣ್ಣೆ ಹಚ್ಚಿ ತೋಟದಲ್ಲಿ ಇಡಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗೆ ಅಂಟಿಕೊಳ್ಳುತ್ತವೆ. ರುಗೋಸ್ ಕೀಟ ಬಾಧೆಯನ್ನು ನಿಯಂತ್ರಿಸಲು 1% ಬೇವಿನ ಎಣ್ಣೆಯನ್ನು (1m) ಸಾಬೂನಿನ ದ್ರಾವಣದಲ್ಲಿ ಕರಗಿಸಿ 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು. ಹೆಚ್ಚಿನ ನೀರಿನ ಪ್ರಮಾಣ ಲಭ್ಯವಿದ್ದಲ್ಲಿ ಹದಿನೈದು ದಿನಗಳ ಅಂತರದಲ್ಲಿ ನೀರಿಗೆ ಸ್ವಲ್ಪ ಸಾಬೂನಿನ ದ್ರಾವಣವನ್ನು ಬೆರೆಸಿ, ಸಿಂಪಡಿಸಬೇಕು. ಇದರಿಂದ ಎಲೆಗಳ ಹಿಂಭಾಗದಲ್ಲಿರುವ ಬಿಳಿನೊಣದ ಸಂಖ್ಯೆಗಳನ್ನು ಕಡಿಮೆ ಮಾಡಬಹುದು.
ಕ್ರಸೂಪರ್ಲಾ ಜರಿಹುಳು ಅಥವಾ ಡೈಕೋಕ್ರೈಸಾಆಸ್ಟರ ಪರತಂತ್ರ ಜೀವಿಗಳನ್ನು ಒಂದು ಹೆಕ್ಟೇರಿಗೆ ಒಂದು ಸಾವಿರ ಮೊಟ್ಟೆ ಅಥವಾ ಮರಿಗಳನ್ನು ಹದಿನೈದು ದಿನಗಳ ಮಧ್ಯಂತರದಲ್ಲಿ ಬಿಡುಗಡೆ ಮಾಡಬೇಕು. ಹೊಸದಾಗಿ ಜೈವಿಕ ಶಿಲೀಂಧ್ರ ಐಸಿರಿಯಾ ಫ್ಯೂಮೋಸೋರೋಸಿಸ್ (5ಗ್ರಾಂ/ಲೀ) ಬಳಸಿ ಪ್ರೌಢ ಹಾಗೂ ಮರಿಗಳನ್ನು ನಾಶ ಮಾಡುವ ತಂತ್ರಜ್ಞಾನ ಲಭ್ಯವಿದ್ದು, ಈ ಶಿಲೀಂಧ್ರವನ್ನು ಬಳಸುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಬಿಳಿನೊಣಗಳ ನಿಯಂತ್ರಣ ಮಾಡಬಹುದು.
ಕೀಟನಾಶಕಗಳ ಬಳಕೆ ಬಿಳಿನೊಣ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಲ್ಲ. ಆದ್ದರಿಂದ ನೈಸರ್ಗಿಕ ಶತ್ರುಗಳು ಹಾಗೂ ಪರಾವಲಂಬಿ ಜೀವಿಗಳನ್ನು ಹೆಚ್ಚಿಸಲು ಅನಧಿಕೃತ ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು.ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಉಡುಪಿ ದೂ.ಸಂಖ್ಯೆ: 0820-2520590/ 2522837 ಅನ್ನು ಸಂಪರ್ಕಿಸಿ.
Kshetra Samachara
03/02/2021 11:28 am