ಉಡುಪಿ: ಜಿಲ್ಲೆಯಲ್ಲಿ ಬೆಳೆದ ಭತ್ತ ಮತ್ತಿತರ ಬೆಳೆ ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿದೆ. ಪರಿಣಾಮ ರೈತರು ಚಿಂತಾಕ್ರಾಂತರಾಗಿದ್ದಾರೆ. ಮುಂಗಾರಿನಲ್ಲಿ ಉತ್ತಮ ಇಳುವರಿ ಪಡೆದಿದ್ದ ಜಿಲ್ಲೆಯ ರೈತಾಪಿ ವರ್ಗ ಹಿಂಗಾರು ಕೃಷಿಯತ್ತ ಮುಖ ಮಾಡಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 7897.34 ಹೆಕ್ಟೇರ್ ನಲ್ಲಿ ಹಿಂಗಾರು ಕೃಷಿ ಮಾಡಲಾಗಿದೆ. ಆದರೆ ವಾತಾವರಣದ ಏರುಪೇರು ಜತೆಗೆ ಕಾಡುಪ್ರಾಣಿಗಳ ಉಪಟಳದಿಂದ ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ.
ತೆಂಗು, ಅಡಕೆ, ಭತ್ತ, ಉದ್ದು, ತರಕಾರಿ ಸಹಿತ ಬೆಳೆಗಳಿಗೆ ವಾನರ ಕಾಟದಿಂದ ಈಗಾಗಲೇ ನೋವುಂಡಿರುವ ರೈತರಿಗೆ ಕಳೆದ ಕೆಲ ವರ್ಷಗಳಿಂದ ಹಂದಿ, ಕಾಡುಕೋಣ, ಜಿಂಕೆ ಉಪಟಳ ತಲೆನೋವಾಗಿದೆ. ಕಾಡು ಪ್ರದೇಶದ ಸಮೀಪದಲ್ಲಿರುವ ಗದ್ದೆಯ ಫೈರನ್ನು ಜಿಂಕೆ, ಕಾಡುಕೋಣ ತಿನ್ನುತ್ತಿವೆ.
ಜಿಲ್ಲೆಯಲ್ಲಿ ಎಕರಗಟ್ಟಲೆ ಕೃಷಿ ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ರೈತರು ರಾತ್ರಿ-ಹಗಲು ನಿದ್ರೆ ಬಿಟ್ಟು ಬೆಳೆ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂದಾಪುರ, ಬ್ರಹ್ಮಾವರ, ಕಾರ್ಕಳ ತಾಲೂಕಿನ ಕೆಲ ಭಾಗದಲ್ಲಿ ಈಗಾಗಲೇ ಬೆಳೆದು ನಿಂತಿರುವ ಭತ್ತದ ಪೈರನ್ನು ಕತ್ತರಿಸಿ ತಿನ್ನುವ ಜಿಂಕೆ ಉಪಟಳಕ್ಕೆ ತಡೆಬೇಲಿ, ಬಲೆ ಕಟ್ಟಿದರೂ ಕಾಟ ಮಾತ್ರ ತಪ್ಪಿಲ್ಲ. ರಾತ್ರಿ ವೇಳೆ ಗದ್ದೆಗೆ ಲಗ್ಗೆ ಇಡುವ ಈ ಪ್ರಾಣಿಗಳು ಇಡೀ ಗದ್ದೆಯಲ್ಲಿ ಸುತ್ತಾಡಿ ಫಸಲು ಹಾಳು ಮಾಡುತ್ತಿವೆ. ಕೆಲವೆಡೆ ಬೆಳಗ್ಗಿನ ಜಾವವೂ ಗದ್ದೆಗೆ ಬಂದು ಬೆಳೆ ಹಾನಿ ಮಾಡುತ್ತದೆ.
Kshetra Samachara
05/01/2021 08:29 pm