ಶಿವಮೊಗ್ಗ: ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗದಲ್ಲಿಯೇ ಅತ್ಯಂತ ಸಡಗರ, ಸಂಭ್ರಮದಿಂದ ದಸರಾ ಮಹೋತ್ಸವ ಆಚರಿಸಲಾಗುತ್ತೆ. ಎರಡನೇ ಅತ್ಯಂತ ವಿಜೃಂಭಣೆಯ ವಿಜಯದಶಮಿ ಮೆರವಣಿಗೆ ಶಿವಮೊಗ್ಗದಲ್ಲಿ ನಡೆಸಲಾಗುತ್ತದೆ. ಅದರಂತೆ, ಈ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಅದು, ಜಂಬೂ ಸವಾರಿ. ಈ ಜಂಬೂ ಸವಾರಿ ಮೈಸೂರಿನಲ್ಲಿ ವೀಕ್ಷಿಸಲು ಅದೆಷ್ಟೋ ಜನರಿಗೆ ಸಾಧ್ಯವಾಗೊದೇ ಇಲ್ಲ. ಅಂತಹವರು ಬೇಸರಪಟ್ಟುಕೊಳ್ಳದೇ, ಶಿವಮೊಗ್ಗಕ್ಕೆ ಬಂದರೆ, ಇಲ್ಲಿ ಜಂಬೂ ಸವಾರಿ ಜೊತೆಗೆ ಆಕರ್ಷಣೀಯವಾದ ಮೆರವಣಿಗೆ ಕಣ್ತುಂಬಿಕೊಳ್ಳಬಹುದಾಗಿದೆ.
ಅಂದಹಾಗೆ, ಶಿವಮೊಗ್ಗದಲ್ಲಿ ಈ ಬಾರಿಯೂ ವೈಭವದ ನವರಾತ್ರಿ ಸಡಗರ ಸಂಪನ್ನಗೊಂಡಿದ್ದು, ಅಂತಿಮದಿನವಾದ ಇಂದು ಬನ್ನಿ ಮುಡಿಯುವ ಮೂಲಕ, ರಾವಣನ ಪ್ರತಿಕೃತಿ ದಹಿಸುವುದರ ಮೂಲಕ ದಸರಾ ಸಂಪನ್ನಗೊಳಿಸಲಾಯಿತು. ನಗರದ ಕೋಟೆ ಶಿವಪ್ಪನಾಯಕ ಅರಮನೆ ಆವರಣದಿಂದ ಹೊರಟ ವಿಜಯದಶಮಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇದಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ತಹಶೀಲ್ದಾರ್ ನಾಗರಾಜ್ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಇನ್ನು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿ, ಬರೋಬ್ಬರಿ 750 ಕೆ.ಜಿ. ತೂಕದ ಬೆಳ್ಳಿಯ ಅಂಬಾರಿಯನ್ನು ಹೊತ್ತು ಸಾಗಿದ ಸಾಗರ್ ಆನೆ ಮತ್ತು ನೇತ್ರ ಹಾಗೂ ಭಾನುಮತಿ ಆನೆಗಳು ನೋಡುಗರ ಕಣ್ಮನ ಸೆಳೆದವು. ಅಲಂಕೃತಗೊಂಡು ಅಂಬಾರಿ ಹೊತ್ತು ಸಾಗಿದ ಗಜಪಡೆಯನ್ನು ಶಿವಮೊಗ್ಗದ ನಾಗರಿಕರು ಕಣ್ತುಂಬಿಕೊಂಡರು.
ಇನ್ನು ಇತ್ತ ಅಂಬಾರಿ ಹೊತ್ತ ಗಜಪಡೆಗಳು ರಾಯಲ್ ಆಗಿ ಸಾಗುತ್ತಿದ್ದರೆ, ಅತ್ತ ವಿವಿಧ ಕಲಾತಂಡಗಳು, ಜನಮನಸೂರೆಗೊಂಡವು. ಮೆರವಣಿಗೆಯುದ್ದಕ್ಕೂ ಮಂಗಳವಾದ್ಯ, ಡೊಳ್ಳು ಕುಣಿತ, ಚಂಡೆ, ಮದ್ದಳೆ, ತಟ್ಟಿರಾಯ, ಕೀಲುಕುದುರೆ ನೃತ್ಯ, ನಗಿಸುವ ಗೊಂಬೆಗಳ ಕುಣಿತ, ಡೊಳ್ಳು, ವೀರಗಾಸೆ, ಕಥಕ್ಕಳಿ ನೃತ್ಯ ಹೀಗೆ ವಿವಿಧ ಕಲಾಪ್ರಕಾರದ ತಂಡಗಳು ಗಮನ ಸೆಳೆದವು. ಅದರಂತೆ, ನಗರದ ಎಲ್ಲಾ ದೇವಾಲಯಗಳ ದೇವಾನುದೇವತೆಗಳು, ಮೆರವಣಿಗೆ ಪಾಲ್ಗೊಂಡಿದ್ದು, ಕಳೆಕಟ್ಟಿತ್ತು.
ಇನ್ನು ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೆರವಣಿಗೆ ಸಂಪನ್ನಗೊಂಡು, ತಹಶೀಲ್ದಾರ್ ನಾಗರಾಜ್ ಅಂಬು ಕಡಿಯುವುದರ ಮೂಲಕ ಬನ್ನಿ ಕಡಿಯುವ ಸಂಪ್ರದಾಯವನ್ನು ನೆರವೇರಿಸಿದರು. ಅಲ್ಲದೇ, ಬನ್ನಿ ಮುಡಿದ ಬಳಿಕ, ಶಿಷ್ಟರನ್ನು ರಕ್ಷಿಸು, ದುಷ್ಟರನ್ನು ಶಿಕ್ಷಿಸು ಎನ್ನುವ ನಾಣ್ಣುಡಿಯಂತೆ, ರಾವಣನ ಬೃಹತ್ ಪ್ರತಿಕೃತಿಯನ್ನು ದಹಿಸಲಾಯಿತು. ಈ ವೇಳೆ ಮೈದಾನದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಈ ಸಂಪ್ರದಾಯವನ್ನು ಕಣ್ತುಂಬಿಕೊಂಡರು.
ಒಟ್ಟಾರೆ, ವಿಜಯದಶಮಿಯಂದು, ನಗರದ ಎಲ್ಲಾ ದೇವಾನುದೇವತೆಗಳ ಜೊತೆಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿ ಜೊತೆಗೆ ಹೋರುವ ಈ ಗಜಪಡೆಗಳನ್ನು ಅಂಬಾರಿಯೊಂದಿಗೆ ಶಿವಮೊಗ್ಗದ ಜನರು ಕಣ್ತುಂಬಿಕೊಂಡು ಪಾವನವಾದರು.
PublicNext
05/10/2022 10:23 pm