ಶಿವಮೊಗ್ಗ: ವಿಶೇಷಚೇತನರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿಶೇಷಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಡಿಸೆಂಬರ್ 13ರಂದು ಬೆಳಗಾವಿ ಸುವರ್ಣ ಸೌಧದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ನವಕರ್ನಾಟಕ ವಿಶೇಷಚೇತನರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಯಶೋಧ ತಿಳಿಸಿದ್ದಾರೆ.
ವಿಶೇಷಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣದ ಇಲಾಖೆ ವತಿಯಿಂದ ಕಳೆದ 17 ವರ್ಷಗಳ ಹಿಂದೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಎಂದು ವಿಂಗಡಿಸಿ ವೇತನ ನೀಡಲಾಗುತ್ತಿತ್ತು. 9 ಸಾವಿರದಿಂದ 15 ಸಾವಿರ ರೂಪಾಯಿಗಳ ವರೆಗೆ ಮಾಸಿಕ ವೇತನ ನೀಡುತ್ತಿದ್ದು, ಈ ವೇತನವು ಯಾವುದಕ್ಕೂ ಸಾಲದಾಗಿದೆ ಎಂದು ದೂರಿದ್ದಾರೆ.
ನಮ್ಮ ಕೆಲಸಗಳ ಜವಾಬ್ದಾರಿ ಕೂಡ ಹೆಚ್ಚಿದೆ. ಸುಮಾರು 21 ಬಗೆಯ ವಿಶೇಷಚೇತನರನ್ನು ಹಾಗೂ ಹಿರಿಯ ನಾಗರಿಕರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ. ಪ್ರತಿ ಗ್ರಾಮ ಪಂಚಾಯತಿಗೆ ಮತ್ತು ನಗರ ಮಟ್ಟದಲ್ಲೂ ಕೂಡ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 6880, ಜಿಲ್ಲೆಯಲ್ಲಿ 285 ಜನರು ಕೆಲಸ ನಿರ್ವಹಿಸುತ್ತಿದ್ದು, ಕಳೆದ 17 ವರ್ಷಗಳಿಂದ ನಮಗೆ ಸೇವಾ ಭದ್ರತೆ ಇಲ್ಲ. ಕನಿಷ್ಟ ವೇತನವೂ ಇಲ್ಲ, ಪಿಎಫ್ ಇಲ್ಲ, ಇಎಸ್‍ಐ ಇಲ್ಲ. ಆದ್ದರಿಂದ ನಮ್ಮನ್ನು ಖಾಯಂಗೊಳಿಸುವುದು ಸೇರಿದಂತೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮನ್ನು ಖಾಯಂಗೊಳಿಸಲು ಆಗದಿದ್ದರೆ ಅಲ್ಲಿಯವರೆಗೆ ಕನಿಷ್ಠ 35 ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
PublicNext
10/12/2024 10:49 pm