ಶಿವಮೊಗ್ಗ: ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದನ್ನು ಮಹಿಳೆಯರು ಸೇರಿದಂತೆ, ಕೌಶಲ್ಯನಿರತರು ಸಮರ್ಥವಾಗಿ ಬಳಸಿಕೊಂಡರೆ, ಈ ಯೋಜನೆ ಫಲಪ್ರದವಾಗಲು ಸಾಧ್ಯ ಎಂದು ಕುವೆಂಪು ವಿವಿಯ ಕುಲಸಚಿವರಾದ ಅನುರಾಧ ಜಿ. ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಜನಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿವಿಧ ಕೌಶಲ್ಯ ತರಬೇತಿಗಳ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಘಟಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಚಾಕಚಕ್ಯತೆ, ಕೌಶಲ್ಯ, ಚತುರತೆಯನ್ನು ಹೊರಗೆಡಹಲು ವೇದಿಕೆ ಬಹಳ ಮುಖ್ಯವಾಗಿದ್ದು, ಈ ವೇದಿಕೆಯನ್ನು ಜನಶಿಕ್ಷಣ ಸಂಸ್ಥೆ ಒದಗಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ. ಅರುಣಾದೇವಿ ಮಾತನಾಡಿ, ಜನಶಿಕ್ಷಣ ಸಂಸ್ಥೆಗೆ ಹಲವಾರು ಪ್ರಶಸ್ತಿಯ ಗರಿಗಳು ಮೂಡಿದ್ದು, ಫಲಾನುಭವಿಗಳಿಗೆ ನೀಡುವ ತರಬೇತಿಯಿಂದಲೇ ಇಷ್ಟೊಂದು ಸಾಧನೆಗೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜನಶಿಕ್ಷಣ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದರೂ ಕೂಡ ಯೂನೆಸ್ಕೋ ಪ್ರಶಸ್ತಿ ಪಡೆಯಬೇಕೆಂಬ ಆಶಯ ನನ್ನದಾಗಿತ್ತು. ಈ ಆಶಯ, ಕನಸು ಫಲಾನುಭವಿಗಳಿಗೆ ನೀಡುವ ತರಬೇತಿ ಮೂಲಕ ಈಡೇರಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಜನಶಿಕ್ಷಣ ಸಂಸ್ಥೆ ಜೆ.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸುಮನಾ ಉಪಸ್ಥಿತರಿದ್ದರು.
PublicNext
17/09/2022 05:06 pm