ಸಾಗರ : ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಆದಾಯ ಸದ್ಭಳಕೆಯಾಗಬೇಕು. ದೇವಸ್ಥಾನದ ವತಿಯಿಂದ ಸುಸಜ್ಜಿತ ಕಲ್ಯಾಣ ಮಂಟಪ ಮತ್ತು ಶಾಲೆ ನಿರ್ಮಾಣದ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ವತಿಯಿಂದ ಕೈಗೊಳ್ಳಬೇಕಾದ ಅಭಿವೃದ್ದಿ ಕಾರ್ಯಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಶಿರಸಿ ಮಾರಿಕಾಂಬಾ ದೇವಸ್ಥಾನ ಉತ್ತಮ ಅಭಿವೃದ್ದಿಯಾಗುತ್ತಿದೆ. ಅದು ನಮ್ಮೂರಿನಲ್ಲೂ ನಡೆಯಬೇಕು. ದೇವಸ್ಥಾನದ ಹೆಸರಿನಲ್ಲಿ 8.5 ಎಕರೆ ಜಾಗವಿದೆ. ಆ ಜಾಗದಲ್ಲಿ ನಿರ್ಮಾಣ ಕಾರ್ಯಗಳು ಕಾಲಮಿತಿಯೊಳಗೆ ನಡೆಯಬೇಕು. ಸುಸಜ್ಜಿತ ಕಲ್ಯಾಣಮಂಟಪ, ಎರಡು ಮೂರು ಅಂತಸ್ತಿನ ಶಾಲೆ ನಿರ್ಮಾಣವಾಗಬೇಕು. ಒಂದರಿಂದ ಹತ್ತನೆ ತರಗತಿವರೆಗೆ ವಿದ್ಯಾಭ್ಯಾಸ ನೀಡಬೇಕು. ಇದಕ್ಕೆ ಬೇಕಾದ ಶಾಲೆ ನಿರ್ಮಾಣವಾಗಬೇಕು. ಜಾತ್ರೆಯನ್ನು ಸಹ ಅಲ್ಲಿಯೆ ನಡೆಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ತಿಳಿಸಿದರು.
ಸಮಿತಿಯಲ್ಲಿ ಸಣ್ಣಪುಟ್ಟ ಗೊಂದಲ ಇರುವ ಬಗ್ಗೆ ಕೆಲವರು ನನ್ನ ಗಮನಕ್ಕೆ ತಂದಿದ್ದಾರೆ. ಅದನ್ನು ಸರಿಪಡಿಸಿಕೊಂಡು ಹೋಗಲು ಸಮಿತಿಗೆ ಸಲಹೆ ನೀಡಿದ್ದೇನೆ. ಸಮಿತಿಯ ಗೌರವಾಧ್ಯಕ್ಷನಾಗಿ ನೆನಪಿನಲ್ಲಿ ಉಳಿಯುವ ಯಾವುದಾದರೂ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ದೇವಸ್ಥಾನದ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಮಾಡಲು ಚಿಂತನೆ ನಡೆಸಿದ್ದೇನೆ. ಸಮಿತಿಯ ಎಲ್ಲರ ಸಲಹೆ ಸಹಕಾರ ಪಡೆದು ಶೀಘ್ರದಲ್ಲಿ ಅಭಿವೃದ್ದಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಯತೀಶ್ ಆರ್., ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಕಾರ್ಯದರ್ಶಿ ಗಿರಿಧರ ರಾವ್, ಪ್ರಮುಖರಾದ ನಾಗೇಂದ್ರ ಕುಮಟಾ, ಸುಂದರ ಸಿಂಗ್, ತಾರಾಮೂರ್ತಿ, ಲೋಕೇಶಕುಮಾರ್, ಆರ್.ಚಂದ್ರು, ಪುರುಷೋತ್ತಮ, ಸಂತೋಷ್ ಶೇಟ್, ಜಯರಾಮ್, ನವೀನ್ ಕೆ.ಸಿ. ಇನ್ನಿತರರು ಹಾಜರಿದ್ದರು
Kshetra Samachara
06/12/2024 03:33 pm