ಸಾಗರ : ನಗರಸಭೆ ಆಡಳಿತ ವೈಫಲ್ಯವನ್ನು ಖಂಡಿಸಿ, ಈ-ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿರುವ ಅಧಿಕಾರಿಗಳ ಕ್ರಮದ ವಿರುದ್ದ ಮಂಗಳವಾರ ಬಿಜೆಪಿ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಟಿ.ಡಿ.ಮೇಘರಾಜ್, ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಮುಖ್ಯಮಂತ್ರಿಗಳು ತಕ್ಷಣ ಶ್ವೇತಪತ್ರ ಹೊರಡಿಸಬೇಕು. ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಿಂತ ನೀರಾಗಿದೆ. ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅವಧಿಯಲ್ಲಿ ತಂದಿರುವ ಅನುದಾನದ ಕಾಮಗಾರಿಗಳು ಸಹ ಪರಿಣಾಮಕಾರಿಯಾಗಿ ಅನುಷ್ಟಾಅನಕ್ಕೆ ಬರುತ್ತಿಲ್ಲ. ಸಚಿವರು, ಶಾಸಕರು ನೂರು ಮೀಟರ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟನೆಗೆ ಐದು ಕಿ.ಮೀ. ಭಾಷಣ ಹೊಡೆಯುತ್ತಿದ್ದಾರೆ. ಸಾಗರ ನಗರವ್ಯಾಪ್ತಿಯಲ್ಲಿ ಸ್ವಚ್ಚತೆ, ಬೀದಿದೀಪ, ಅಭಿವೃದ್ದಿ ಕೆಲಸ ಯಾವುದೂ ನಡೆಯುತ್ತಿಲ್ಲ. ಸೊರಬ ರಸ್ತೆ ಅಗಲೀಕರಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಹಾಲಪ್ಪ ಹರತಾಳು 100 ಕೋಟಿ ರೂ. ಅನುದಾನ ತಂದಿದ್ದರು. ಆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಜನರನ್ನು ನಗರಸಭೆಗೆ ಅಲೆಸಲು ಈ-ಸ್ವತ್ತು ಎಂಬ ಹೊಸ ಅಸ್ತçವನ್ನು ಅಧಿಕಾರಿಗಳ ಕೈಗೆ ನೀಡಿದೆ. ನಗರವ್ಯಾಪ್ತಿಯಲ್ಲಿ ಸುಮಾರು ೭ಸಾವಿರಕ್ಕೂ ಹೆಚ್ಚು ಖಾತೆಗೆ ಈ-ಸ್ವತ್ತು ಮಾಡಿಸಲು ಅಧಿಕಾರಿಗಳು ಜನರ ರಕ್ತ ಹೀರುತ್ತಿದ್ದಾರೆ. ಯಾವುದೇ ಕೆಲಸ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಜನರನ್ನು ಅಲೆದಾಡಿಸುವುದು ನಗರಸಭೆ ಅಧಿಕಾರಿಗಳಿಗೆ ಮಾಮೂಲಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಹಣದ ಸದ್ಭಳಕೆಯಾಗುತ್ತಿಲ್ಲ. ಒಟ್ಟಾರೆ ಕಾಂಗ್ರೇಸ್ ಆಡಳಿತದಲ್ಲಿ ನಗರಸಭೆ ಆಡಳಿತ ಹಳಿ ತಪ್ಪಿ ಹೋಗಿದೆ ಎಂದು ದೂರಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ನಗರಸಭೆ ಅನಾಥವಾಗಿದೆ. ದಿನನಿತ್ಯ ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ನಗರಸಭೆಗೆ ಅಲೆದಾಡುತ್ತಿದ್ದು, ಈ-ಆಸ್ತಿ ಹೆಸರಿನಲ್ಲಿ ಜನರ ಶೋಷಣೆ ನಡೆಯುತ್ತಿದೆ. ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿ ಜಾಸ್ತಿಯಾಗಿದ್ದು, ನಗರಸಭಾ ಸದಸ್ಯರಿಗೆ ಗೌರವ ಸಿಗುತ್ತಿಲ್ಲ. ಅಧಿಕಾರಿಗಳು ಕಾಂಗ್ರೇಸ್ ಪುಡಾರಿಗಳು ಹೇಳಿದ ಮಾತು ಕೇಳುತ್ತಿದ್ದಾರೆ. ಬೀದಿದೀಪ, ವಿದ್ಯುತ್, ಸ್ವಚ್ಚತೆಗೆ ಆದ್ಯತೆ ನೀಡುತ್ತಿಲ್ಲ. ಕಾಂಗ್ರೇಸ್ ಸದಸ್ಯರ ವಾರ್ಡ್ಗಳಲ್ಲಿ ಎಲ್ಲ ಕೆಲಸವಾಗುತ್ತಿದ್ದು, ಬಿಜೆಪಿ ಸದಸ್ಯರ ವಾರ್ಡ್ಗಳ ಬಗ್ಗೆ ತಾರತಮ್ಯನೀತಿ ಅನುಸರಿಸಲಾಗುತ್ತಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಸಾಗರದಲ್ಲಿ ಯಾವುದೇ ಹೊಸ ಕಾಮಗಾರಿಯನ್ನು ರಾಜ್ಯ ಸರ್ಕಾರದಿಂದ ಶಾಸಕರು ತಂದಿಲ್ಲ. ಕೇಂದ್ರ ಸರ್ಕಾರದ್ದು, ನಗರಸಭೆ ಸಾಮಾನ್ಯನಿಧಿಯಿಂದ ಮಂಜೂರಾದ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಇಂದಿರಾ ಕ್ಯಾಂಟಿನ್‌ಗೆ ೫ ಲಕ್ಷ ರೂ. ಬಂದಿದ್ದು ಬಿಟ್ಟರೆ ಬೇರೆ ಯಾವುದೇ ಅನುದಾನ ಬಂದಿಲ್ಲ ಎನ್ನುವುದನ್ನು ನಾನು ದಾಖಲೆ ಸಹಿತ ಸಾಬೀತು ಮಾಡುತ್ತೇನೆ. ನಗರಸಭೆಯಲ್ಲಿ ಜನರ ಕೆಲಸವಾಗುತ್ತಿಲ್ಲ. ಅಧಿಕಾರಿಗಳು ಯಾರದ್ದೋ ಮರ್ಜಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮೇಸ್ತಿç, ವಿ.ಮಹೇಶ್, ಪ್ರೇಮ ಸಿಂಗ್ ಇನ್ನಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಸವಿತಾ ವಾಸು, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಶಂಕರ್ ಅಳ್ವಿಕೋಡಿ, ತುಕಾರಾಮ್, ಕುಸುಮ ಸುಬ್ಬಣ್ಣ, ಸತೀಶ್ ಕೆ., ಪರಶುರಾಮ್, ಪ್ರಶಾಂತ್ ಕೆ.ಎಸ್., ಸುಧಾ ಉದಯ್, ಮಹೇಶ್ ಎಂ.ಆರ್., ಕೃಷ್ಣ ಶೇಟ್, ಸಂತೋಷ್ ಶೇಟ್, ಶ್ರೀರಾಮ್, ಗೋಪಾಲ್ ಇನ್ನಿತರರು ಹಾಜರಿದ್ದರು.
Kshetra Samachara
10/12/2024 10:53 pm