ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಇದಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಇದೇ ಪ್ರಕರಣ ಮತ್ತಷ್ಟು ಕಾಂಗ್ರೆಸ್ ನಾಯಕರಿಗೆ ಉರುಳಾಗಿದ್ದು, ತೆಲಂಗಾಣದ ಐವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ {ಇಡಿ} ನೋಟಿಸ್ ಜಾರಿ ಮಾಡಿದೆ.
ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ, ಸಿಕಂದರಾಬಾದ್‌ನ ಮಾಜಿ ಸಂಸದ ಪಿ ಅಂಜನ್‌ಕುಮಾರ್ ಯಾದವ್ ಮತ್ತು ರಾಜ್ಯದ ಮಾಜಿ ಸಚಿವರಾದ ಜೆ ಗೀತಾ ರೆಡ್ಡಿ, ಎಂಡಿ ಅಲಿ ಶಬ್ಬೀರ್ ಮತ್ತು ಪಿ ಸುದರ್ಶನ್ ರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವರೆಲ್ಲರೂ ಬರುವ ಅಕ್ಟೋಬರ್ನಲ್ಲಿ ವಿಚಾರಣೆಗೆ ಹಾಜರು ಆಗಬೇಕಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾಗಿಯಾಗಿರುವ ಕಂಪೆನಿಗಳ ಖಾತೆಗಳಿಗೆ ಐವರು ತೆಲಂಗಾಣ ಕಾಂಗ್ರೆಸ್ ನಾಯಕರು ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ ಎಂದು ಇಡಿ ಶಂಕಿಸಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
PublicNext
24/09/2022 05:53 pm