ತುಮಕೂರು : ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಶುಕ್ರವಾರ ನಡೆದ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಆರಾಧ್ಯದೈವ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಿಗಳ ಸಮಾಜದ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಗಳಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ 4.45 ಕೋಟಿ ಅನುದಾನವನ್ನು ನೀಡಿ ಅವರ ಶೈಕ್ಷಣಿಕ ಸಾಧನೆಗೆ ಸಹಕರಿಸಲು ಸರ್ಕಾರ ಬದ್ಧವಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ವಿಶೇಷ ಅನುದಾನವನ್ನು ನೀಡಿ ಅವರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ. ಕೃಷಿಯಾಧಾರಿತ ಕಸುಬುದಾರರಿಗೆ ವಿಶೇಷ ಘಟಕ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸಿದ್ದಗಂಗಾ ಮಠಾಧೀಶ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ವಿವಿಧ ಮಠಾಧೀಶರು ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ತು ಸದಸ್ಯರಾದ ಸಿ.ಪಿ ಯೋಗೀಶ್ವರ್, ಪಿ.ಆರ್ ರಮೇಶ್, ಶಾಸಕರಾದ ಜ್ಯೋತಿಗಣೇಶ್, ಡಾ.ಸಿ ಎಂ ರಾಜೇಶ್ ಗೌಡ, ಮಸಾಲ ಜಯರಾಂ, ಮುರುಳಿಧರ್ ಹಾಲಪ್ಪ ಮುಂತಾದವರು ಹಾಜರಿದ್ದರು.
PublicNext
26/08/2022 10:42 pm