ಯಾದಗಿರಿ: ಸುರಪುರದಲ್ಲಿ ರಾಜಕೀಯ ನಾಯಕರ ನಡುವೆ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಜೋರಾಗಿ ನಡೆದಿದ್ದು, 2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭಾರೀ ಕಸರತ್ತು ನಡೆಸಿದ್ದಾರೆ.
ತಾಲೂಕಿನಾದ್ಯಂತ ಅಭಿವೃದ್ಧಿ ಮಂತ್ರ ಪಠಿಸುತ್ತಿರೋ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ- ಹಳ್ಳಿಗೂ ಓಡಾಡುತ್ತಿದ್ದು, ಪ್ರತಿಷ್ಠೆಯ ಕಣದಲ್ಲಿ ಗೆಲುವಿಗಾಗಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಬಿಜೆಪಿ ಶಾಸಕ ನರಸಿಂಹ ನಾಯಕ ರಾಜುಗೌಡ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನಡುವೆ ಮಾತಿನ ಚಕಮಕಿ ನಡೆದಿದ್ದು, ತಾಲೂಕಿನ ವಾಗಣಗೇರಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಲೆಕ್ಷನ್ ವೇಳೆ ಜಗಳ ತೆಗೆದು "ಕಡಿಬೇಕು ಇಲ್ಲದಿದ್ದರೆ ಕಡಿಸಿಕೊಳ್ಳಬೇಕು ಅಂದ್ರೆ ಗೆಲ್ಲುತ್ತೇವೆ ನಾವು" ಎಂದಿದ್ದರು.
ಇದಕ್ಕೆ ನಿನ್ನೆ ಸಂಜೆ ಹುಣಸಗಿ ತಾಲೂಕಿನ ಇಸಾಂಪುರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ರಾಜುಗೌಡ ಅವರು, ಒಡೆಯಬೇಕು, ಕಡಿಬೇಕು ಅಂದ್ರೆ ನಡೆಯಲ್ಲ. ನಾನು 2004ರಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಇಂತಹ ರೌಡಿಸಂಗೆ ಕಡಿವಾಣ ಹಾಕಿದ್ದೇನೆ. ಏನಿದ್ರು ಕ್ಷೇತ್ರದಲ್ಲಿ ಯಪ್ಪಾ..ಯವ್ವಾ.. ಅಂಥಾ ಜನರ ಸೇವೆ ಮಾಡಬೇಕು. ಜನರಿಗೆ ಜಗಳ ಹಚ್ಚಿ ಅವರನ್ನ ಜೈಲಲ್ಲಿ ಮಲಗಿಸಿ ನಾವು ಎಸಿ ಬೆಡ್ ರೂಮ್ನಲ್ಲಿ ಮಲಗೋದು ಎಷ್ಟು ಸಮಂಜಸ ಅಂತಾ ತಿರುಗೇಟು ನೀಡಿದ್ದಾರೆ.
ಅದೇನೇ ಇರಲಿ, ಏಟಿಗೆ ತಿರುಗೇಟಿನ ಮಾತುಗಳು ಜನರಲ್ಲಿ ಕುತೂಹಲ ಮೂಡಿಸಿದ್ದು, ಮತದಾರ ಪ್ರಭು ಯಾರಿಗೆ ವಿಜಯದ ಮಾಲೆ ಹಾಕುತ್ತಾನೆ ಎಂದು ಬರುವ ಎಲೆಕ್ಷನ್ ರಿಸಲ್ಟ್ ವರೆಗೆ ಕಾದು ನೋಡಬೇಕಿದೆ.
ವರದಿ : ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
28/04/2022 03:46 pm