ನವದೆಹಲಿ: ದಿನದಿಂದ ದಿನಕ್ಕೆ ಟ್ವಿಟ್ಟರ್‌ನಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
2021ರ ಆಗಸ್ಟ್‌ನಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದ ಚಿತ್ರವನ್ನು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ವಿವಾದ ಸೃಷ್ಟಿಸಿತ್ತು. ಹೀಗಾಗಿ ಅವರ ಟ್ವಿಟ್ಟರ್ ಖಾತೆಯನ್ನು ಕೆಲ ದಿನಗಳ ಕಾಲ ಬ್ಲಾಕ್ ಮಾಡಲಾಗಿತ್ತು.
ಈ ಸಂಬಂಧ ರಾಹುಲ್ ಗಾಂಧಿ ಅವರು ಟ್ವಿಟ್ಟರ್ ಸಂಸ್ಥೆಗೆ ಪತ್ರ ಬರೆದಿದ್ದು, 'ಮೊದಲಿಗೆ ನನಗೆ ಪ್ರತಿ ತಿಂಗಳು ಸುಮಾರು 2 ಲಕ್ಷ ಹೊಸಬರು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ 2021ರ ಆಗಸ್ಟ್ ನಂತರ ಈ ಸಂಖ್ಯೆ ಕೇವಲ 2,500ರ ಆಸುಪಾಸಿನಲ್ಲಿದೆ. ಅಂದರೆ ಎರಡೂವರೆ ಸಾವಿರ ಜನರು ಮಾತ್ರ ಪ್ರತಿ ತಿಂಗಳು ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕೆಲ ಸಮಯದಿಂದ ಟ್ವಿಟರ್ ಫಾಲೋವರ್ಗಳ ಸಂಖ್ಯೆ 19.5 ಮಿಲಿಯನ್ನಲ್ಲೇ ಸ್ಥಿರವಾಗಿದೆ' ಎಂದು ದೂರಿದ್ದಾರೆ.
'ಭಾರತದಲ್ಲಿ ಹೆಚ್ಚುತ್ತಿರುವ ನಿರಂಕುಶ ಅಧಿಕಾರಕ್ಕೆ ಟ್ವಿಟ್ಟರ್ ಸಕ್ರಿಯವಾಗಿ ಸಹಾಯ ಮಾಡುತ್ತಿಲ್ಲ ಎಂದು ಖಾತರಿಪಡಿಸುವ ಮಹತ್ತರ ಹೊಣೆಗಾರಿಕೆ ನಿಮ್ಮ ಮೇಲೆ ಇದೆ' ಎಂದು ಅಗ್ರವಾಲ್ ಅವರಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಸಂಸ್ಥೆಯು, 'ಯಾರಿಗೆ ಎಷ್ಟು ಮಂದಿ ಫಾಲೋ ಮಾಡುತ್ತಾರೋ ಅಷ್ಟು ಮಾತ್ರ ಟ್ವಿಟರ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಫಾಲೋ ಮಾಡುವವರನ್ನು ಸ್ಪಾಮ್‌ಗೆ ಹಾಕುವ ಯಾವುದೇ ಅವಕಾಶ ಟ್ವಿಟ್ಟರ್‌ನಲ್ಲಿ ಇಲ್ಲ. ಒಂದು ವೇಳೆ ಫಾಲೋ ಮಾಡಿದವರ ಹೆಸರು ಫಾಲೋದಲ್ಲಿ ಕಾಣಿಸುತ್ತಿಲ್ಲ ಎಂದರೆ ಫಾಲೋ ಮಾಡಿದವರಿಗೆ ಈ ವಿಷಯ ಸ್ಪಷ್ಟವಾಗುತ್ತದೆ. ಆದರೆ ಎಲ್ಲಿಯೂ ಹಾಗಾಗಲಿಲ್ಲ. ಎಷ್ಟು ಮಂದಿ ಫಾಲೋ ಮಾಡುತ್ತಿದ್ದಾರೋ ಅಷ್ಟೇ ಸಂಖ್ಯೆಗಳು ಕಾಣಿಸುತ್ತವೆ. ಟ್ವಿಟರ್ ಮೇಲೆ ಬಂದಿರುವ ಆರೋಪದಲ್ಲಿ ಹುರುಳಿಲ್ಲ' ಎಂದು ಹೇಳಿದೆ.
PublicNext
27/01/2022 02:02 pm