ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ವಾಗ್ದಾಳಿ ಮುಂದುವರಿದಿದೆ.
ಪುಟ್ಕೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರ್ಕಾರವನ್ನೇ ತೆಗೆದ ಮಹಾನ್ ನಾಯಕ ಸಿದ್ದರಾಮಯ್ಯ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಎಚ್.ಡಿ. ದೇವೇಗೌಡ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ನಿಮ್ಮ ತಂದೆ ಕೂಡ ಪುಟಗೋಸಿ ಹುದ್ದೆಯಲ್ಲಿ ಇದ್ದದ್ದಾ" ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪುಟಗೋಸಿ ಹುದ್ದೆ ಎಂದು ಕರೆಯುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರು ಸಂವಿಧಾನಾತ್ಮಕ ಹುದ್ದೆಗೆ ಅವಮಾನ ಮಾಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟು ಗೌರವ ಕೊಡುತ್ತಾರೆ ಎಂದು ಇದರಿಂದಲೇ ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರನ್ನು ಕುಟುಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದವರು ಒಟ್ಟು 17 ಜನ ಶಾಸಕರು. ಇದರಲ್ಲಿ ಜೆಡಿಎಸ್‌ನ 3 ಶಾಸಕರಿದ್ದಾರೆ. ಅವರನ್ನು ನಾನೇ ಕಳುಹಿಸಿದ್ದಾ ಎಚ್.ಡಿ.ಕುಮಾರಸ್ವಾಮಿ ಅವರೇ? ನಿಮ್ಮ ಶಾಸಕರು ನಿಮ್ಮ ಮಾತು ಕೇಳ್ತಾರ? ಇಲ್ಲ ನನ್ನ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.
ಶಾಸಕರು, ಮಂತ್ರಿಗಳು ಮತ್ತು ಜನರ ಮಧ್ಯೆ ಇರಬೇಕಾದ ಮುಖ್ಯಮಂತ್ರಿ ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ಕೂತು ಸರ್ಕಾರ ನಡೆಸಿದರೆ ಆ ಸರ್ಕಾರ ಎಷ್ಟು ದಿನ ಉಳಿದೀತು? ಸಮ್ಮಿಶ್ರ ಸರ್ಕಾರ ಉರುಳಲು ಎಚ್.ಡಿ.ಕುಮಾರಸ್ವಾಮಿ ಅವರ ಬೇಜವಾಬ್ದಾರಿ ನಡವಳಿಕೆ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರ ಉರುಳುವ ಹಂತಕ್ಕೆ ಹೋದಾಗಲೂ ಎಚ್.ಡಿ.ಕುಮಾರಸ್ವಾಮಿ ಅಮೇರಿಕಾಗೆ ಹೋಗಿ ಕೂತಿದ್ದು ಏಕೆ? ನಾನೇ ಫೋನ್ ಮಾಡಿ ಕುಮಾರಸ್ವಾಮಿ ಅವರೆ ಸರ್ಕಾರ ಬೀಳುವ ಹಂತಕ್ಕೆ ಹೋಗಿದೆ, ಭಾರತಕ್ಕೆ ಬನ್ನಿ ಎಂದು ಕರೆದರೆ ಬಂದ್ರಾ? ಸರ್ಕಾರ ಉಳಿಸಿಕೊಳ್ಳುವ ಮನಸು ಕುಮಾರಸ್ವಾಮಿಗೆ ಇರಲಿಲ್ಲ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ಹುಟ್ಟುಹಬ್ಬದ ದಿನ ಕಡೇ ಬಾರಿ ನಾನು ಭೇಟಿಯಾಗಿದ್ದು. ಆಮೇಲೆ ಒಂದು ದಿನವೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ವೈಯಕ್ತಿಕವಾಗಿ ಒಮ್ಮೆಯಾದರೂ ಭೇಟಿಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.
2005ರಲ್ಲಿ ಧರಂಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದು ಸನ್ಯಾಸತ್ವಕ್ಕಾಗಿಯೋ ಅಥವಾ ಅಧಿಕಾರಕ್ಕಾಗಿಯೋ? ಕುಮಾರಸ್ವಾಮಿ ಅವರ ಪಕ್ಷದ ಹೆಸರಲ್ಲಷ್ಟೇ ಜಾತ್ಯಾತೀತತೆ ಉಳಿದಿದೆ, ಅಧಿಕಾರ ಬೇಕಾದಾಗ ಕೋಮುವಾದಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಳ್ತಾರೆ.
ಯಡಿಯೂರಪ್ಪ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಗೃಹ ಸಚಿವ ಅಮಿತ್ ಶಾ ಕೂಡ ಅವರ ಪಕ್ಷದವರೆ, ರಾಜ್ಯದ ವಿರೋಧ ಪಕ್ಷದ ನಾಯಕನಾದ ನನ್ನ ಮಾತು ಕೇಳಿ ನರೇಂದ್ರ ಮೋದಿ ಸರ್ಕಾರ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಮಾಡಿಸುತ್ತದಾ ? ಎಂದು ಟ್ವೀಟ್ ಗಾಲ ಮೂಲಕ ಪ್ರಶ್ನಿಸಿದ್ದಾರೆ.
PublicNext
13/10/2021 04:37 pm