ಉಡುಪಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಸಂವಿಧಾನಬದ್ಧ ಅಧಿಕಾರದಲ್ಲಿದ್ದರೂ ಕೂಡ ಕರ್ನಾಟಕದ ನೆಲವನ್ನು ಆಕ್ರಮಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿಯಾದದ್ದು. ಭಾರತದ ಒಳಗೇ ಇದ್ದು ಚೀನಾ ಅಥವಾ ಪಾಕಿಸ್ತಾನದ ರೀತಿ ನೆಲ ಆಕ್ರಮಿಸಿಕೊಳ್ಳುವ ಹೇಳಿಕೆ ನೀಡುತ್ತಿರುವುದು ಮಹಾ ಸಿಎಂಗೆ ಶೋಭೆ ತರುವುದಿಲ್ಲ, ಇದು ಖಂಡನೀಯ ಎಂದು ಕರವೇ ಮುಖಂಡ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮರಾಠಿ ಎಂಇಎಸ್ ಪುಂಡರ ವಿರುದ್ಧ ಕರವೇ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸಿಎಂ ಇದೇ ರೀತಿ ಉದ್ಧಟತನದ ಹೇಳಿಕೆಗಳನ್ನು ನೀಡಿದರೆ ಬೆಳಗಾವಿ ಭಾಗದಲ್ಲಿ ವಾಸವಾಗಿರುವ ಕನ್ನಡಿಗರ ಪ್ರದೇಶದಲ್ಲಿ ಮಹಾರಾಷ್ಟ್ರ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.
ಬೆಳಗಾವಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಹಿಂದಿನಿಂದಲೂ ರಾಜಕೀಯ ಕಾರಣಗಳಿಗಾಗಿ ಮೃದು ಧೋರಣೆ ತಳೆದಿದೆ ಎಂದ ಅವರು, ಮಹಾರಾಷ್ಟ್ರದ ಉದ್ಧಟತನದ ವಿರುದ್ಧ ಕರವೇ ಈ ಹಿಂದೆಯೂ ಹೋರಾಟ ಮಾಡಿದೆ, ಮುಂದೆಯೂ ಮಾಡಲಿದೆ ಎಂದರು.
PublicNext
06/02/2021 05:01 pm