ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಚ್ಚು ನಿರ್ಧಾರ, ಅತಾರ್ಕಿಕ ತೀರ್ಮಾನ ಕೈಗೊಳ್ಳವುದಕ್ಕೇನೆ ಸರಕಾರ ಎನ್ನುತ್ತಾರೆಯೋ ಏನೋ ಗೊತ್ತಿಲ್ಲ. ಈಗ ಮತ್ತೇ ಎರಡನೇ ಹಂತದ ಕೊರೊನಾ ಅಲ್ಲಲ್ಲಿ ಕಾಣ ತೊಡಗಿದೆ. ಅದೂ ಅಧಿಕಾರದ ಕೇಂದ್ರ ಸ್ಥಾನ ಬೆಂಗಳೂರಲ್ಲಿ ಎಂಬುದು ಗಮನಾರ್ಹ.
ಕರ್ನಾಟಕದ ಗಡಿಗೇ ಅಂಟಿಕೊಂಡಿರುವ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಅದರ ಹಾವಳಿ ವಿಪರೀತವಾಗ ತೊಡಗಿದೆ. ಶನಿವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 6 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯಗಳಿಂದ ಬರುವವರ ಮೇಲೆ ನೀಗಾ ಇಡಲೇ ಬೇಕು. ಕಳೆದ ಬಾರಿ ಸರಕಾರದ ನಿರ್ಲಕ್ಷದಿಂದಾಗಿಯೇ ಮಹಾರಾಷ್ಟ್ರ ನಮಗೆ ಕೊರೊನಾ ಉಡುಗೊರೆ ನೀಡಿತು.
ಆದರೆ ಗಡಿಯಲ್ಲಿ ಕಟ್ಟೆಚ್ಚರ ವಹಿಸುವ ಬದಲು ನಮ್ಮ ಧೀಮಂತ ಸರಕಾರ ರಾಜ್ಯದಲ್ಲಿ ನಡೆಯುವ ಮದುವೆಗಳ ಮೇಲೆ ನಿಗಾ ಇಡಲು ಮಾರ್ಷಲ್ ಗಳನ್ನು ನಿಯೋಜಿಸುವುದಾಗಿ ಫರ್ಮಾನು ಹೊರಡಿಸಿದೆ. ಮದುವೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಂತೆ, 500 ಕ್ಕೂ ಹೆಚ್ಚು ಜನ ಸೇರಬಾರದಂತೆ. ಮಾರ್ಷಲ್ ಗಳು ತಲೆ ಎಣಿಸುತ್ತ ಕೂಡ್ರಬೇಕೆ? ಐನೂರಕ್ಕಿಂತ ಹೆಚ್ಚಾಗಿ ಒಂದು ವೇಳೆ ಶಾಸಕರು, ಇತರೆ ಗಣ್ಯರು ಬಂದರೆ ವಾಪಸ್ ಹೋಗಿ ಎಂದು ಹೇಳಲು ಸಾಧ್ಯವೆ?
ಹೇಳಿ ಇದಕ್ಕಿಂತ ಗೊಂದಲ ಇನ್ನೇನು ಬೇಕು. ಮದುವೆಗೆ ಬರುವ ಬೀಗರು ಬಿಜ್ಜರಿಗೆ, ಅತಿಥಿ ಅಭ್ಯಾಗತರಿಗೆ ಮಾತ್ರ ಅಮರಿಕೊಳ್ಳುತ್ತೇನೆಂದು ಕೊರೊನಾ ಏನಾದರೂ ನೋಟಿಸ್ ನೀಡಿದೆಯಾ ಆರೋಗ್ಯ ಮಂತ್ರಿ ಸುಧಾಕರ್ ಅವರೆ? ಅಲ್ಲಾ ಸ್ವಾಮಿ... ಲಕ್ಷಾಂತರ ಜನರನ್ನು ಸೇರಿಸಿ ಜಾತಿ ಸಮಾವೇಶ, ಪಾದಯಾತ್ರೆ ರಾಜಕೀಯ ಸಭೆ ಸಮಾರಂಭ ಮಾಡುವವರಿಗೆ, ಧರಣಿ ಕುಳಿತು ಕೊಳ್ಳುವವರಿಗೆ ಕೊರೊನಾ ಏನಾದರೂ ವಿನಾಯ್ತಿ ನೀಡಿದೆಯೇ?
ಲಾಕ್ಡೌನ್ ಸಮಯದಲ್ಲಿ ಮದುವೆಗಳಲ್ಲಿ ಕನಿಷ್ಟ ಸಂಖ್ಯೆಯಲ್ಲಿ ಜನ ಸೇರಬೇಕೆಂಬ ನಿಯಮವಿದ್ದಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಎಲ್ಲ ನಿಯಮಗಳನ್ನು ಬದಿಗಿಟ್ಟು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು. ಈಗ ಯಾವುದೇ ನಿರ್ಬಂಧವಿಲ್ಲ ಹೀಗಾಗಿ ಮದುವೆಗಳಿಗೆ ಮಾರ್ಷಲ್ ಗಳನ್ನು ಕಳಿಸಿ ಏನು ಸಾಧನೆ ಮಾಡುತ್ತೀರಿ? ಅವರೇನು ಕೊರೊನಾ ಕಟ್ಟಿಹಾಕುವರೆ?
ಮತ್ತೆ ಕೊರೊನಾ ತನ್ನ ಅಟ್ಟಹಾಸ ಮೆರೆಯಬಾರದು ಜನ ತೊಂದರಗೀಡಾಗಬಾರದೆಂಬ ಕಳಕಳಿ ತಮಗಿದ್ದರೆ ಈ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ.
ತಾತ್ಕಾಲಿಕವಾಗಿ ಎಲ್ಲ ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಸಿ, ಧರಣಿ ಸತ್ಯಾಗ್ರಹ ನಿರತರನ್ನುತತಕ್ಷಣ ಮಾತುಕತೆಗೆ ಆಹ್ವಾನಿಸಿ ಸಮಸ್ಯೆಬಗೆಹರಿಸಲು ಪ್ರಯತ್ನಸಿ ಇಲ್ಲವೆ ಕಾಲಾವಕಾಶ ಕೇಳಿ ಧರಣಿ ನಿಲ್ಲಿಸಲು ಸೂಚಿಸಿ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ಅರೋಗ್ಯ ತಪಾಸಣೆ ಕಡ್ಡಾಯಗೊಳಿಸಿ, ಹೆಚ್ಚಿನ ಜನ ಸೇರುವ ಎಲ್ಲ ಕಾರ್ಯಕ್ರಮಗಳ ಮುಂದೂಡುವಂತೆ ಸಂಬಂಧಪಟ್ಟ ಸಂಘಟಕರಿಗೆ ಸೂಚಿಸಿ.
ಸವದತ್ತಿ ಎಲ್ಲಮ್ಮ ದರ್ಶನಕ್ಕೆ ಮತ್ತೇ ನಿರ್ಬಂಧ ಹೇರಲಾಗಿದೆ. ಪಕ್ಕದ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಈ ಕ್ರಮ ಸ್ವಾಗತಾರ್ಹ. ಅದೇ ರೀತಿ ರಾಜ್ಯ ಎಲ್ಲ ಪ್ರಮುಖ ದೇವಸ್ಥಾನಗಳಿಗೂ ಇದೇ ನಿಯಮ ಜಾರಿಗೊಳಿಸಿದರೆ ಸೂಕ್ತ. ಭಕ್ತರಿಗೆ ಅವರ ಆರೋಗ್ಯ ಮುಖ್ಯ ಹೀಗಾಗಿ ಎಲ್ಲರೂ ಸಹಕರಿಸುವುದರಲ್ಲಿ ಸಂದೇವಿಲ್ಲ.
ಇವೆಲ್ಲವುಗಳಿಗಿಂತಲೂ ಎಲ್ಲರಿಗೂ ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದವರು ಲಸಿಕಾ ಕೇಂದ್ರದತ್ತ ಸುಳಿಯುತ್ತಿಲ್ಲ ಅದಕ್ಕೆ ಕ್ರಮಕಗೊಳ್ಳುವುದು ಸೂಕ್ತವಲ್ಲವೆ?
PublicNext
23/02/2021 11:19 am