ಥಾಣೆ: ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ ಎಂದು ರಾಹುಲ್ ಗಾಂಧಿ ಅವರು ಥಾಣೆಯ ಭಿವಾಂಡಿ ಪಟ್ಟಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಸ್ಥಳೀಯ ಆರ್ ಎಸ್ ಎಸ್ ಪದಾಧಿಕಾರಿ ರಾಜೇಶ್ ಕುಂಟೆ 2014ರಲ್ಲಿ ದೂರು ನೀಡಿದ್ದರು.
2018ರಲ್ಲಿ ಭಿವಾಂಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರಾಹುಲ್ ಗಾಂಧಿ, ತಾವು ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದರು. ಬಳಿಕ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಲಾಗಿತ್ತು. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯವು ಮೇ 15ಕ್ಕೆ ನಿಗದಿಪಡಿಸಿದೆ.
ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಜೆವಿ ಪಲಿವಾಲ್ ಅವರು ಶನಿವಾರ ವಿಚಾರಣೆಗೆ ತೆಗೆದುಕೊಂಡರು. ರಾಹುಲ್ ಗಾಂಧಿ ಪರ ಹಾಜರಿದ್ದ ವಕೀಲ ನಾರಾಯಣ ಅಯ್ಯರ್, ಕೋವಿಡ್ ನಿರ್ಬಂಧಗಳ ಕಾರಣದಿಂದ ರಾಹುಲ್ ಅವರು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ವಿನಾಯಿತಿ ನೀಡುವಂತೆ ಕೋರಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ನೀಡಿತು.
ಬಾಂಬೆ ಹೈಕೋರ್ಟ್ಗೆ ಇದೇ ಪ್ರಕರಣದಲ್ಲಿ ವಿಚಾರಣೆಯ ಪುರಾವೆಯನ್ನಾಗಿ ಕೆಲವು ದಾಖಲೆಗಳನ್ನು ನೀಡಬೇಕಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ಕುಂಟೆ ಪರ ವಕೀಲ ಪಿಪಿ ಜೇವಂತ್ ಅವರು ಮನವಿ ಮಾಡಿದರು. ಆದರೆ ಕೆಳ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿಲ್ಲ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು. ಆದರೆ ಜೇವಂತ್ ಮತ್ತೆ ಮನವಿ ಮಾಡಿದಾಗ ಅದಕ್ಕೆ ಮ್ಯಾಜಿಸ್ಟ್ರೇಟ್ ಒಪ್ಪಿಗೆ ನೀಡಿದರು.
PublicNext
22/02/2021 07:27 pm