ತನ್ನ ಜಮೀನಿನಲ್ಲಿ ಕಾಲುವೆ ನೀರು ಬರುತ್ತಿದೆ ಎನ್ನುವ ಕಾರಣಕ್ಕೆ ರಸ್ತೆಯನ್ನ ಅಗೆದು ಎರಡು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿ ಬಿಜೆಪಿ ಮುಖಂಡನೋರ್ವ ದರ್ಪ ತೋರಿದ್ದು ಆತನ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ- ಯಬರಟ್ಟಿ ರಸ್ತೆಯಲ್ಲಿನ ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತಮ್ಮಣ್ಣ ತೇಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆಯನ್ನೇ ಅಗೆದು ಜನರಿಗೆ ತೊಂದರೆ ನೀಡಿದ್ದಾನೆ. ಇದರಿಂದ ಕಂಗಾಲಾದ ಸಾರ್ವಜನಿಕರು ಮುಖಂಡನ ವಿರುದ್ಧ ಹರಿಹಾಯುತ್ತಿದ್ದಾರೆ.
ಅಥಣಿ ತಾಲೂಕಿನ ಶೇಗುಣಶಿ - ಯಬರಟ್ಟಿ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ನೀರು ಪಾಸ್ ಆಗಲೆಂದು ಕೆಳಗೆ ಪೈಪ್ ಲೈನ್ ಅವಳವಡಿಸಿ ಮೇಲೆ ರಸ್ತೆ ಮಾಡಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ಹಾಕಿದ್ದರಿಂದ ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ರಸ್ತೆ ಅಗೆದು ತಮ್ಮಣ್ಣ ದರ್ಪ ಪ್ರದರ್ಶಿಸಿದ್ದಾನೆ.
ಒಟ್ಟಿನಲ್ಲಿ ಮಾಜಿ ಜಿ.ಪಂ ಸದಸ್ಯನ ದಾದಾಗಿರಿ ವಿರುದ್ಧ ಇದುವರೆಗೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬಿಜೆಪಿ ಮುಖಂಡ ಎಂಬ ಕಾರಣಕ್ಕೆ ಮುಖ್ಯ ರಸ್ತೆಯನ್ನ ಅಗೆದು ಒಂದು ವಾರ ಕಳೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವದರ ಜೊತೆಗೆ ಅಂದಾ ದರ್ಬಾರ ತೋರುತ್ತಿರುವ ಬಿಜೆಪಿ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನ ಕಾಯ್ದು ನೋಡಬೇಕಿದೆ.
PublicNext
30/08/2022 12:53 pm