ದಾವಣಗೆರೆ: ಕಾಂಗ್ರೆಸ್ ಯುವ ಮುಖಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಸವರಾಜಪೇಟೆಯಲ್ಲಿ ನಡೆದಿದೆ. 42 ವರ್ಷದ ಸೀಮೆಎಣ್ಣೆ ಪರಮೇಶಿ ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆಟೋರಿಕ್ಷಾದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ತನ್ನ ಪರಿಚಯಸ್ಥರ ಮನೆಗೆ ಹೋಗಿದ್ದ ಸೀಮೆಎಣ್ಣೆ ಪರಮೇಶ್ ಅವರು ಮಾತನಾಡಿಸಿಕೊಂಡು ತಮ್ಮ ಮನೆಗೆ ಹೊರಟಿದ್ದರು. ಈ ವೇಳೆ ಏಕಾಏಕಿ ಅಡ್ಡಗಟ್ಟಿದ ಮೂವರು ಹಂತಕರು ಅವರ ಮೇಲೆ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಎಸ್ಕೇಪ್ ಆಗಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪರಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನ ನಡೆಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ. ಜನನಿಬಿಡ ಪ್ರದೇಶದಲ್ಲಿಯೇ ಈ ಕೃತ್ಯ ನಡೆದಿರುವುದರಿಂದ ಜನರು ಬೆಚ್ಚಿಬಿದ್ದಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸೀಮೆಎಣ್ಣೆ ಪರಮೇಶ್ ಅವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ದ್ವೇಷದಿಂದವೋ ಅಥವಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದ ಪರಮೇಶ್ ಕಾಂಗ್ರೆಸ್ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಹಿರಿಯ ಮುಖಂಡ ಸೀಮೆಎಣ್ಣೆ ಮಲ್ಲೇಶ್ ಅವರ ಸಂಬಂಧಿಯಾಗಿದ್ದ ಪರಮೇಶ್ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
12/08/2021 10:08 am