ಬೆಂಗಳೂರು: ಇಂದು(ಮಂಗಳವಾರ)ಸಂಜೆ ವಿಧಾನಸಭೆ ಹಾಗೂ ಪರಿಷತ್ ಸದಸ್ಯರಿಗೆ 'ದಿ ಕಾಶ್ಮೀರಿ ಫೈಲ್ಸ್' ಚಿತ್ರ ವೀಕ್ಷಣೆಗೆ ಉಚಿತ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಈ ವಿಷಯವನ್ನು ಇಂದು ಪರಿಷತ್ ನಲ್ಲಿ ಸಭಾಪತಿ ಪ್ರಸ್ತಾಪಿಸಿದಾಗ, ಗದ್ದಲ ಕೋಲಾಹಲಕ್ಕೂ ಕಾರಣವಾಯಿತು.
ಇಂದು ವಿಧಾನಪರಿಷತ್ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಯವರು, ದಿ ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಣೆಗಾಗಿ ಸದಸ್ಯರನ್ನು ಆಹ್ವಾನಿಸಿದರು. ಆಗ ಫರ್ಜಾನಾ, ವಾಟರ್ ಅಂತ ಎರಡು ಸಿನಿಮಾ ಇವೆ. ಅವೆರಡನ್ನೂ ತೋರಿಸಿ ಎಂದು ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸೋದಕ್ಕೆ ಹೊರಟಿದೆ ಎಂಬುದೇ ಅರ್ಥವಾಗುತ್ತಿಲ್ಲವೆಂದು ಹರಿಪ್ರಸಾದ್ ಹೇಳಿದಾಗ, ಮಧ್ಯಪ್ರವೇಶಿಸಿದ ಸಲೀಂ ಅಹಮದ್ ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು? ಎಂದು ಪ್ರಶ್ನಿಸಿದರು. ಇದರಿಂದಾಗಿ ಪರಿಷತ್‌ನಲ್ಲಿ ಆಡಳಿತ ವಿಪಕ್ಷಗಳ ಸದಸ್ಯರ ನಡುವೆ ಗಲಾಟೆ ನಡೆಯಿತು.
ನಮಗೆ ಬಾಬೂ ಭರಂಗಿಯಂತ ಸಿನಿಮಾ ತೋರಿಸಿ. ಈ ತರದ ದ್ವೇಷ ಭಾವನೆ ನಿಮ್ಮಲ್ಲಿ ಇರೋದು ಗೊತ್ತಿದೆ ಎಂಬುದಾಗಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಹೀಗಾಗಿ ಕಲಾಪದಲ್ಲಿ ಗದ್ದಲ ಉಂಟಾದಾಗ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.
PublicNext
15/03/2022 03:46 pm