ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ರೋಷನ್ ಬೇಗ್ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ರೋಷನ್ ಬೇಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಕ್ಫ್ ಖಾತೆಯ ಸಚಿವರಾಗಿದ್ದರು. ಐಎಂಎ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ತಾನು ಯಾವುದೇ ಅಕ್ರಮ ಎಸಗಿಲ್ಲ ಹೇಳಿದ್ದರು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಸರ್ಕಾರದ ಎಸ್‌ಐಟಿ ತನಿಖೆಗಿಂತ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಹೇಳಿದ್ದರು.
ಈ ನಡುವೆ 2019ರಲ್ಲಿ ಭಿನ್ನಮತೀಯ ಕಾಂಗ್ರೆಸ್ ಶಾಸಕರ ಜೊತೆ ರೋಷನ್ ಬೇಗ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಬಿಜೆಪಿ ಸೇರ್ಪಡೆಗೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರು. ಆದ್ರೆ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿರಲಿಲ್ಲ.
ಎರಡ್ಮೂರು ಬಾರಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ರೋಷನ್ ಬೇಗ್ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ರೋಷನ್ ಬೇಗ್ ಸೇರ್ಪಡೆಗೆ ರಾಜ್ಯ ನಾಯಕರು ಒಪ್ಪಿದ್ದರೂ ಆ ಬಳಿಕ ಹೈಕಮಾಂಡ್ ಕೊಕ್ಕೆ ಹಾಕಿತ್ತು.
ಶಿವಾಜಿನಗರ ಉಪಚುನಾವಣೆಯಲ್ಲಿ ಬಿಜೆಪಿ ತನಗೆ ಟಿಕೆಟ್ ನೀಡಬಹುದು ಎಂದು ನಿರೀಕ್ಷೆಯಲ್ಲಿ ರೋಷನ್ ಬೇಗ್ ಇದ್ದರು. ಆದರೆ ಬಿಜೆಪಿ ಸರವಣ ಅವರಿಗೆ ಟಿಕೆಟ್ ನೀಡಿತ್ತು. ಹೀಗಿದ್ದರೂ ಬಿಜೆಪಿ ಪರ ಒಳಗೊಳಗೆ ರೋಷನ್ ಬೇಗ್ ಕೆಲಸ ಮಾಡಿದ್ದರು.
PublicNext
22/11/2020 11:09 pm