ಬೆಂಗಳೂರು : ಅನ್ನದಾತನ ಆಕ್ರೋಶದ ಕಿಚ್ಚು ಇಂದು ಇಡೀ ದೇಶವ್ಯಾಪಿ ಪಸರಿಸಿದೆ ಈ ವೇಳೆ ಕಾಂಗ್ರೆಸ್ ಶಾಸಕರು ನಿಮ್ಮ ಸರ್ಕಾರ ತೆಗೆಯುವುದಿಲ್ಲ.
ರೈತರೇ ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ನಾಯಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ಬೂಟಾಟಿಕೆ ಮಾಡ್ತಾರೆ.
ಆದರೆ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ. ಈ ಕಾನೂನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದ್ದಾರೆ.
ಈಗಾಗಲೇ ಆನೇಕಲ್ ಮತ್ತು ಕನಕಪುರ ಭಾಗದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಬೀಜ ಕೊಟ್ಟು ಬೆಲೆ ಬಳಿಕ ಕ್ವಾಲಿಟಿ ಸರಿಯಿಲ್ಲ ಅಂತ ಹೇಳಿದ್ದವು. ರೈತನ ರಕ್ಷಣೆ ನಮ್ಮ ಹೊಣೆ.
ಹೀಗಾಗಿ ಪ್ರತಿಭಟನೆಗೆ ಕರೆ ನೀಡಿದ್ದು, ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ವಂದನೆಗಳು ಎಂದು ತಿಳಿಸಿದರು.
ಭೂ ಸುಧಾರಣಾ ಕಾಯ್ದೆಯನ್ನು ತಂದಿದ್ದು ಕಾಂಗ್ರೆಸ್. ನಾವು ಯಾವುದೇ ಇಂತಹ ರೈತ ವಿರೋಧಿ ಕಾನೂನು ತರಲಿಲ್ಲ.
ಅರಣ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಎಸ್ಸಿ ಮತ್ತು ಎಸ್ಟಿ ಅವರಿಗೆ ಜಮೀನು ಕೊಟ್ಟೆವು. ಕಾಂಗ್ರೆಸ್ಸಿನದ್ದು ಏನೇ ಇದ್ದರೂ ಕೊಡುವ ಇತಿಹಾಸ. ಬಿಜೆಪಿ ಇತಿಹಾಸ ಕಿತ್ತುಕೊಳ್ಳುವುದು.
ರೈತರ ಜಮೀನು ಕಿತ್ತುಕೊಳ್ಳಲು ಈಗ ಈ ರೀತಿಯ ಕಾನೂನು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
PublicNext
28/09/2020 03:20 pm