ಮೂಡುಬಿದಿರೆ: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಹಾಗೂ ಕ್ರೈಸ್ಟ್ ಕಾಲೇಜಿನ ಸಹಯೋಗದಲ್ಲಿ ನಡೆದಂತಹ ದಕ್ಷಿಣ ವಲಯದ ಪುರುಷರ ಖೋ-ಖೋ ಚಾಂಪಿಯನ್ಶಿಪ್ 2021-22 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರಥಮ ಸ್ಥಾನವನ್ನು ಪಡೆದು ಹಿಮಾಚಲಪ್ರದೇಶದಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಖೋ-ಖೋ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನು ಪಡೆದಿದೆ.
ದಕ್ಷಿಣ ವಲಯದಿಂದ ಕ್ಯಾಲಿಕಟ್ ವಿಶ್ವವಿದ್ಯಾನಿಲಯವು ದ್ವಿತೀಯ ಸ್ಥಾನವನ್ನು, ಕುವೆಂಪು ವಿಶ್ವವಿದ್ಯಾನಿಲಯವು ತೃತೀಯ ಸ್ಥಾನವನ್ನು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯವು ಚತುರ್ಥ ಸ್ಥಾನವನ್ನು ಪಡೆದಿವೆ. ಅಂತಿಮ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿರುದ್ಧ ಜಯಗಳಿಸಿತು. ಮಂಗಳೂರು ವಿಶ್ವವಿದ್ಯಾನಿಲಯದ ಮಹೇಶ್ ಸವ್ಯಸಾಚಿ ( ಆಲ್‌ರೌಂಡರ್) ಪ್ರಶಸ್ತಿಯನ್ನು ಪಡೆದರು.
ದಕ್ಷಿಣ ವಲಯದಿಂದ ಆಯ್ಕೆಯಾದ ನಾಲ್ಕು ತಂಡಗಳು ಮಾರ್ಚ್ 27 ರಿಂದ 30ರ ವರೆಗೆ ಹಿಮಾಚಲಪ್ರದೇಶದಲ್ಲಿ ನಡೆಯುವಂತಹ ಅಖಿಲ ಭಾರತ ಮಟ್ಟದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿವೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಶ್ಲಾಘಿಸಿದ್ದಾರೆ.
Kshetra Samachara
14/03/2022 05:55 pm