ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಸಂಪರ್ಕಿಸುವ ಸೇವಾಜೆ-ಮಡಪ್ಪಾ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದೆ. ಜೂ.26 ರಂದು ಅಭಿವೃದ್ಧಿಯಾದ ಸೇವಾಜೆ-ಮಡಪ್ಪಾ ರಸ್ತೆಯ ಹಾಗು ಸೇವಾಜೆ ಸೇತುವೆಯ ಉದ್ಘಾಟನೆ 26 ರಂದು 12 ಗಂಟೆಗೆ ನಡೆಯಲಿದೆ.
ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಕರ್ತರ ಸಂಘದ ಪ್ರಯತ್ನ:
ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಯತ್ನ ಮತ್ತು ಗ್ರಾಮ ವಾಸ್ತವ್ಯದ ಫಲವಾಗಿ ಸರಕಾರ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಜ.11ರಂದು ಶಂಕುಸ್ಥಾಪನೆ ನೆರವೇರಿ ಕಾಮಗಾರಿ ಆರಂಭಗೊಂಡಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು. ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.
ಕೂಡಲೇ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 2 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಅದರಲ್ಲಿ 1.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ತಿಯಾಗಿದೆ. ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ.ಮಿ. ರಸ್ತೆ ಅಭಿವೃದ್ಧಿಯಾಗಿತ್ತು. ಉಳಿದ 3.7 ಕಿ.ಮಿ. ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿತ್ತು. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ ಈ ಅನುದಾನದಲ್ಲಿ ರಸ್ತೆಯ 3.7 ಕಿ.ಮಿ. ಅಭಿವೃದ್ಧಿಯಾಗಿತ್ತು. 3.75 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿಯಾಗಿದ್ದು 150 ಮೀಟರ್ ಕಾಂಕ್ರೀಟೀಕರಣ ಮತ್ತು ಉಳಿದ ಭಾಗ ಡಾಮರೀಕರಣ ನಡೆದಿದೆ.
Kshetra Samachara
25/06/2022 03:15 pm