`ದೇವರು ಕೊಟ್ಟರೂ ಪೂಜಾರಿ ಬಿಡ' ಎಂಬ ಗಾದೆ ಮಾತಿನಂತಾಗಿದೆ ಉಪ್ಪಿನಂಗಡಿ ಗ್ರಾಮದ ದುರ್ಗಾಗಿರಿಯಲ್ಲಿರುವ ಹರೀಶ್ಚಂದ್ರ ಘಾಟ್ ಸ್ಮಶಾನದ ಅಭಿವೃದ್ಧಿ ಕಾಮಗಾರಿ. ಸಮಾಜ ಕಲ್ಯಾಣ ಇಲಾಖೆಯಿಂದ ದೊರೆತ 16.66 ಲಕ್ಷ ರೂ. ಅನುದಾನದಲ್ಲಿ ಇಲ್ಲಿ ನಿರ್ಮಾಣವಾಗಿದ್ದು ಸಂಪೂರ್ಣ ಕಳಪೆ ಮತ್ತು ಅಸಮರ್ಪಕ ಕಾಮಗಾರಿ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿಯವರೆಗೂ ದೂರು ನೀಡಿದರೂ ಸ್ಪಂದನೆ ಮಾತ್ರ ದೊರೆತ್ತಿಲ್ಲ.
ಇದರಿಂದ ಬೇಸತ್ತ ಪತ್ರಕರ್ತರೋರ್ವರು ಮುಖ್ಯಮಂತ್ರಿಗೆ ಮತ್ತೊಂದು ದೂರು ನೀಡಿದ್ದು, ಸತತ ಮನವಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಸರಕಾರದ ಈ ನಡೆಯನ್ನು ಖಂಡಿಸಿ ನಿರಾಸೆಯಿಂದ ಅಂತಿಮವಾದ ಪತ್ರವೊಂದನ್ನು ನಿಮಗೆ ಕಳುಹಿಸುತ್ತಿದ್ದೇನೆ. ನ್ಯಾಯ ಒದಗಿಸುವುದಾದರೆ ನ್ಯಾಯ ಒದಗಿಸಿ ಎಂದು ಲಿಖಿತವಾಗಿ ತಿಳಿಸಿದ್ದಾರೆ.
ದುರ್ಗಾಗಿರಿಯಲ್ಲಿರುವ ಹರೀಶ್ಚಂದ್ರ ಘಾಟ್ ಅಭಿವೃದ್ಧಿಗಾಗಿ ಬಿಡುಗಡೆಗೊಂಡ 16.66 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಶೌಚಾಲಯವು ತೀರಾ ಇಕ್ಕಟ್ಟಾಗಿ ಬಳಸಲು ಯೋಗ್ಯವಿಲ್ಲದಂತಾಗಿದೆ. ಇದರ ಗೋಡೆಗೆ ಒಂದು ಕಡೆ ನೀರಿನ ನಳ ಸಿಕ್ಕಿಸಿರುವುದರಿಂದ ಅರ್ಧದಷ್ಟು ಮಾತ್ರ ಬಾಗಿಲು ತೆರೆಯಲು ಸಾಧ್ಯವಾಗುತ್ತದೆ. ಅದಕ್ಕೆ ತಾಗಿಕೊಂಡೇ ಇರುವ ಸ್ನಾನ ಗೃಹ ಕೂಡಾ ತೀರಾ ಇಕ್ಕಟ್ಟಾದ ಸ್ಥಿತಿಯಲ್ಲಿದೆ. ಇವುಗಳಿಗೆ ಅಳವಡಿಸಿದ ದಾರಂದ ಫೈಬರ್ನಾಗಿದ್ದು ತೀರಾ ತೆಳುವುಳ್ಳದಾಗಿದೆ.
ಶೌಚಾಲಯ ಕಟ್ಟಡದ ಗೋಡೆಗೆ ಹಾಗೂ ಸ್ಮಶಾನದ ಮೊದಲಿದ್ದ ಕಟ್ಟಡದ ಮಧ್ಯೆ ಇವೆರಡಕ್ಕೆ ಹೊಂದಿಕೆಯಾಗುವಂತೆ ಗೋಡೆ ಕಟ್ಟಿ ಅದಕ್ಕೆ ಶೀಟ್ ಹಾಸಿ ದಾಸ್ತಾನು ಕೊಠಡಿ ನಿರ್ಮಿಸಲಾಗಿದ್ದು, ದುರಂತವೆಂದರೆ ಮಳೆ ಬಂದಾಗ ಮೇಲ್ಛಾವಣಿ ಶೀಟಿನ ನೀರು ದಾಸ್ತಾನು ಕೊಠಡಿಗೆ ಹಾಗೂ ಸ್ಮಶಾನದ ಮೊದಲಿದ್ದ ಕಟ್ಟಡಕ್ಕೂ ಬೀಳುತ್ತಿದೆ.
ಸುಮಾರು 300 ಲೀಟರ್ ಸಾಮರ್ಥ್ಯದ ಸಣ್ಣ ಸಿಂಥೆಟಿಕ್ ಟ್ಯಾಂಕ್ ಸ್ನಾನಗೃಹಕ್ಕೆ ಇಡಲಾಗಿದೆ. ಹೊರಾಂಗಣಕ್ಕೆ ಇಂಟರ್ಲಾಕ್ ಅಳವಡಿಸಲಾಗಿದೆ. ಇಷ್ಟಕ್ಕೆ ಈ ಕಾಮಗಾರಿ ಮುಗಿಸಿ ಅನುದಾನದ ಸಂಪೂರ್ಣ ಹಣವನ್ನು ಪಡೆಯಲಾಗಿದೆ. ಮೇಲ್ನೋಟಕ್ಕೆ ನೋಡುವಾಗಲೇ ಈ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿದೆ ಎಂದು ಕಂಡು ಬರುತ್ತಿದ್ದು, ಈ ಕಾಮಗಾರಿಯಲ್ಲಿ ಹಲವು ಲಕ್ಷಗಳನ್ನು ಗುಳುಂ ಮಾಡಿರುವ ಬಗ್ಗೆ ಸಂಶಯ ಮೂಡುತ್ತಿದೆ.
ಈ ಕಾಮಗಾರಿಯು ಕಳಪೆಯಾಗುತ್ತಿದ್ದು, ಇದರ ಎರಡನೇ ಕಂತನ್ನು ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಪಾವತಿಸಬಾರದೆಂದು 2021ರಲ್ಲಿ ಸ್ಮಶಾನ ಸಮಿತಿಯು ಸಮಾಜ ಕಲ್ಯಾಣ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ ಇದನ್ನು ಕಡೆಗಣಿಸಿ ಎರಡನೇ ಕಂತನ್ನೂ ಗುತ್ತಿಗೆದಾರರಿಗೆ ಪಾವತಿಸಲಾಯಿತು. ಆ ಬಳಿಕ ಶಾಸಕರು, ಸಮಾಜ ಕಲ್ಯಾಣ ಸಚಿವರು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಲಿಖಿತ ದೂರನ್ನು ಅಂಚೆ ಮೂಲಕ ನೀಡಲಾಗಿತ್ತು.
ಆದರೆ ಯಾವುದಕ್ಕೂ ಸ್ಪಂದನೆ ಬಿಡಿ. ಹಿಂಬರವೂ ಬಂದಿಲ್ಲ. ಎಸಿಬಿಗೆ ದೂರು ನೀಡಿದರೂ, ಈವರೆಗೆ ತನಿಖೆಗೆ ಮುಂದಾಗಿಲ್ಲ. ಹಾಗಾಗಿ ಬೇಸತ್ತು ಮುಖ್ಯಮಂತ್ರಿಗೆ ಕೊನೆಯ ಪತ್ರವೊಂದನ್ನು ನಾನು ಬರೆದಿದ್ದೇನೆ ಎಂದು ಇಲ್ಲಾದ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪತ್ರಕರ್ತ ಯು.ಎಲ್. ಉದಯಕುಮಾರ್ ಅವರು `ಪಬ್ಲಿಕ್ ನೆಕ್ಸ್ಟ್'ಗೆ ತಿಳಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ದೀಪು ಉಬಾರ್
Kshetra Samachara
03/06/2022 06:39 pm