ಪುತ್ತೂರು: ಸಂಬಳ ಕಡಿತ ಮಾಡುತ್ತಿರುವ ಗುತ್ತಿಗೆ ಸಂಸ್ಥೆಯ ಕ್ರಮವನ್ನು ಖಂಡಿಸಿ ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ವ್ಯಾಪ್ತಿಯ ಹೊರಗುತ್ತಿಗೆ ಚಾಲಕರು ಶುಕ್ರವಾರ ರಾತ್ರಿಯಿಂದ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಿದ್ದು ಪುತ್ತೂರಿನಲ್ಲಿ ಸರಕಾರಿ ಬಸ್ ಸೇವೆ ಅಸ್ತವ್ಯಸ್ತಗೊಂಡಿದೆ.
ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದ ಬಸ್‌ಗಳಲ್ಲಿ ಸುಮಾರು 60ರಷ್ಟು ಚಾಲಕರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರ ಸಂಬಳದಲ್ಲಿ ಗುತ್ತಿಗೆ ಸಂಸ್ಥೆ ಭಾರೀ ಪ್ರಮಾಣದ ಕಡಿತ ಮಾಡುತ್ತಿದೆ. ಸಂಬಳ ಕಡಿತ ಮಾಡದಂತೆ ಹಲವು ಭಾರೀ ಗುತ್ತಿಗೆ ಸಂಸ್ಥೆಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಹಿನ್ನೆಲೆಯಲ್ಲಿ 40 ಬಸ್ ಚಾಲಕರು ಶುಕ್ರವಾರ ರಾತ್ರಿಯಿಂದ ಹಠಾತ್ ಆಗಿ ಬಸ್ ಚಾಲನೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಚಾಲಕರ ಮುಷ್ಕರದಿಂದ ಪುತ್ತೂರು ಡಿಪೋದಿಂದ ಹೊರಡುವ ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಶನಿವಾರವೂ ಹೊರಗುತ್ತಿಗೆ ಬಸ್ ಚಾಲಕರು ಮುಷ್ಕರ ಮುಂದುವರಿಸಿದ್ದರು.
ಇದರಿಂದ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ಡಿಪೋದಿಂದ ಮಂಗಳೂರು, ಉಪ್ಪಿನಂಗಡಿ, ಸುಳ್ಯ, ವಿಟ್ಲ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಗುತ್ತಿಗೆ ನೌಕರರ ಹಠಾತ್ ಪ್ರತಿಭಟನೆಯಿಂದ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ಗಳನ್ನೇ ಆಶ್ರಯಿಸಿರುವ ಪ್ರಯಾಣಕರು ಸಂಕಷ್ಟಕ್ಕೆ ಸಿಲುಕಿದರು.
ಸದ್ಯ 40 ಬಸ್ ಚಾಲಕರು ಮುಷ್ಕರ ನಡೆಸುತ್ತಿದ್ದೇವೆ. ಸಂಬಳ ಸಮಸ್ಯೆ ಪರಿಹರಿಸದಿದ್ದಲ್ಲಿ ಎಲ್ಲಾ 60 ಚಾಲಕರು ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದೇವೆ" ಎಂದು ಹೊರಗುತ್ತಿಗೆ ಬಸ್ ಚಾಲಕರು ತಿಳಿಸಿದ್ದಾರೆ.
Kshetra Samachara
15/12/2024 07:27 pm