ಬಂಟ್ವಾಳ: ಅವಧಿ ಮೀರಿದ ಅವೈಜ್ಞಾನಿಕ ಟೋಲ್ ಸಂಗ್ರಹ ರದ್ದುಗೊಳಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಈ ಅವೈಜ್ಞಾನಿಕ ಟೋಲ್ ಸಂಗ್ರಹದಿಂದಾಗಿ ಪ್ರಜ್ಞಾವಂತ ಜನರಿಗೆ ತೊಂದರೆಯಾಗುತ್ತಿದೆ. ಆಡಳಿತದಲ್ಲಿರುವವರಿಗೆ ರಚನಾತ್ಮಕ ಹಾಗೂ ಅಭಿವೃದ್ದಿ ಕಾರ್ಯ ಬೇಕಾಗಿಲ್ಲ, ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅದಾನಿ ಸಂಸ್ಥೆಗೆ ಸೇರಿದ ಯುಪಿಸಿಎಲ್ ನ ಉಡುಪಿ- ಕೇರಳ ವಿದ್ಯುತ್ ಪ್ರಸರಣ ಮಾರ್ಗ ಜಿಲ್ಲೆಯಲ್ಲಿ ಹಾದು ಹೋಗಲಿದ್ದು, ಈ ಬಗ್ಗೆಯೂ ಜನರು ಎಚ್ಚೆತ್ತುಕೊಂಡು ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಈ ಬಗ್ಗೆ ತಕ್ಷಣ ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದರು.
ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಮಾತನಾಡಿ, ಟೋಲ್ ಸಂಗ್ರಹದ ಅವಧಿ ಈ ಮೊದಲೇ ಪೂರ್ಣಗೊಂಡಿದ್ದರೂ ಕೂಡ ಇಲ್ಲಿ ಕಾನೂನು ಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ತುರ್ತು ವಾಹನ ಸಂಚರಿಸಲು ವ್ಯವಸ್ಥೆ ಇಲ್ಲ, ಸೂಕ್ತ ಸರ್ವಿಸ್ ರಸ್ತೆಗಳಿಲ್ಲ ಎಂದು ಆರೋಪಿಸಿದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿವಿಧ ಸಂಘಟನೆಗಳ ಪ್ರಮುಖರಾದ ಸದಾಶಿವ ಬಂಗೇರ, ಬೇಬಿ ಕುಂದರ್, ಸುರೇಶ್ ಕುಮಾರ್ ಬಂಟ್ವಾಳ್, ಬಿ.ಶೇಖರ್, ಹಾರೂನ್ ರಶೀದ್, ಮಹಮ್ಮದ್ ನಂದಾವರ, ಪ್ರಕಾಶ್ ಶೆಟ್ಟಿ ತುಂಬೆ, ಲೋಲಾಕ್ಷ ಶೆಟ್ಟಿ, ಲೋಕೇಶ್ ಸುವರ್ಣ ಅಲೆತ್ತೂರು, ಶ್ರೀಧರ ಅಮೀನ್, ಮಧುಸೂದನ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಎನ್ಎಚ್ಎಐ ಸಹಾಯಕ ತಾಂತ್ರಿಕ ಎಂಜಿನಿಯರ್ ಅನಿರುದ್ಧ್ ಅವರಿಗೆ ಮನವಿ ಸಲ್ಲಿಸಲಾಯಿತು.
Kshetra Samachara
19/01/2021 06:12 pm