ಮಂಗಳೂರು: ಮುಂಬೈ (ಲೋಕಮಾನ್ಯ ತಿಲಕ್) ಹಾಗೂ ಮಂಗಳೂರು ಸೆಂಟ್ರಲ್ (ರೈಲು ನಂ. 02620/02619) ಮಧ್ಯೆ ಡಿ.17ರಿಂದ ಪ್ರಾರಂಭಗೊಂಡ ದೈನಂದಿನ ಸೂಪರ್ ಫಾಸ್ಟ್ ಹಬ್ಬದ ವಿಶೇಷ ರೈಲಿನ ಸಂಚಾರವನ್ನು 2021ರ ಫೆ.1ರ ವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಈ ಮೊದಲು ಡಿ.17ರಿಂದ 31ರ ವರೆಗೆ ರೈಲು ಸಂಚಾರವನ್ನು ಪ್ರಕಟಿಸಲಾಗಿತ್ತು. ಇದೀಗ ಈ ಸಂಚಾರವನ್ನೂ ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ. ಮಂಗಳೂರು ಸೆಂಟ್ರಲ್ ಕಡೆಯಿಂದ ಜ.1ರಿಂದ 31ರ ವರೆಗೆ ಹಾಗೂ ಮುಂಬೈ ಲೋಕಮಾನ್ಯ ತಿಲಕ್‌ನಿಂದ ಜ.2ರಿಂದ ಫೆ.1ರ ವರೆಗೆ ಈ ರೈಲು ತನ್ನ ದೈನಂದಿನ ಓಡಾಟ ನಡೆಸಲಿದೆ.
ಡಿ.17ರ ವೇಳಾಪಟ್ಟಿಯಂತೆ ರೈಲು ಪ್ರತಿದಿನ ಅಪರಾಹ್ನ 2:25ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಬೆಳಗ್ಗೆ 6:35ಕ್ಕೆ ಮುಂಬೈ ತಲುಪಿದರೆ, ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಅಪರಾಹ್ನ 3:20ಕ್ಕೆ ಹೊರಟು ಮರುದಿನ ಬೆಳಗ್ಗೆ 7:30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ.
ಇದಲ್ಲದೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಇನ್ನೂ ನಾಲ್ಕು ರೈಲುಗಳ ಅವಧಿ ವಿಸ್ತರಿಸಲಾಗಿದೆ. ಎರ್ನಾಕುಲಂ ಜಂಕ್ಷನ್- ಓಕಾ ನಡುವಿನ ದ್ವಿ ಸಾಪ್ತಾಹಿಕ ವಿಶೇಷ ರೈಲು ಸಂಚಾರವನ್ನು ಎರಡೂ ಕಡೆಗಳಿಂದ ಜ.1ರಿಂದ ಫೆ.1ರ ವರೆಗೆ ವಿಸ್ತರಿಸಲಾಗಿದೆ.
ಅಲ್ಲದೆ, ತಿರುನಲ್ವೇಲಿ-ದಾದರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಹಬ್ಬದ ವಿಶೇಷ ರೈಲಿನ ಸಂಚಾರವನ್ನು ಜ.6ರಿಂದ 28ರ ವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
26/12/2020 10:58 pm