ಮಂಗಳೂರು: ನಗರದಲ್ಲಿನ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನೊಳಗಡೆ ತರುವುದು ಹಾಗೂ ಸುಪ್ರಿಂ ಕೋರ್ಟ್ ಆದೇಶದನ್ವಯ ಬಸ್, ಲಾರಿ ಮತ್ತು ಆಟೋ ರಿಕ್ಷಾ ಮುಂತಾದ ವಾಹನಗಳಿಗೆ ಪ್ರತಿಫಲಿತ (ರಿಫ್ಲೆಕ್ಟರ್) ಸ್ಟಿಕ್ಕರ್ ಸಮಸ್ಯೆಯನ್ನು ಬಗೆಹರಿಸುವುದು ತನ್ನ ಜವಾಬ್ದಾರಿ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಈ ಕುರಿತು ಸಾರಿಗೆ ಸಚಿವರಾದ ಶ್ರೀರಾಮುಲು ಅವರನ್ನು ಭೇಟಿಯಾಗಿ ಮಹತ್ವದ ಸಭೆ ನಡೆಸಿರುವ ಶಾಸಕ ವೇದವ್ಯಾಸ್ ಕಾಮತ್ ಅವರು, ಬ್ಯಾಟರಿ ಚಾಲಿತ ವಾಹನಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನೊಳಗೆ ತರದಿರುವ ಕಾರಣ ಇಂಧನ ಚಾಲಿತ ರಿಕ್ಷಾ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ.
ಜೀವನೋಪಾಯಕ್ಕಾಗಿ ಆಟೋ ರಿಕ್ಷಾವನ್ನೇ ನಂಬಿರುವ ಇಂಧನ ಚಾಲಿತ ಆಟೋ ರಿಕ್ಷಾ ಚಾಲಕರ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ತನ್ನ ಮೇಲಿದೆ. ಅದನ್ನು ಸಮರ್ಪಕವಾಗಿ ಬಗೆಹರಿಸಲಾಗುತ್ತದೆ. ಹಾಗಾಗಿ ಇಂಧನ ಚಾಲಿತ ರಿಕ್ಷಾ ಚಾಲಕರು ಆತಂಕಪಡುವ ಅಗತ್ಯವಿಲ್ಲ. ಸಮಸ್ಯೆಯನ್ನು ಬಗೆಹರಿಸುವುದು ನನ್ನ ಜವಬ್ದಾರಿ ಎಂದು ಶಾಸಕ ಕಾಮತ್ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಬಸ್, ಲಾರಿ ಹಾಗೂ ಆಟೋ ರಿಕ್ಷಾ ಸೇರಿದಂತೆ ವಾಹನಗಳಿಗೆ ಪ್ರತಿಫಲನ ಸ್ಟಿಕ್ಕರ್ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅವೆಲ್ಲವನ್ನೂ ಸಮರ್ಥವಾಗಿ ಜಾರಿಗೊಳಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
Kshetra Samachara
23/09/2022 10:47 pm