ಉಡುಪಿ: ಶಿಕ್ಷಣ, ಆರ್ಥಿಕ ಕ್ರೋಢೀಕರಣ ಸಹಿತ ವಿವಿಧ ವಿಷಯಗಳಲ್ಲಿನ ವಿಶೇಷ ಸಾಧನೆಗಾಗಿ ಕೇಂದ್ರ ಸರಕಾರದ ಪಂಚಾಯತ್‌ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಉಡುಪಿ ಜಿ.ಪಂ. ಆಯ್ಕೆಯಾಗಿದೆ. ಡಿಸೆಂಬರ್ 11ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಪ್ರಶಸ್ತಿ ಮತ್ತು 2 ಕೋಟಿ ನಗದು ಹಣ ಸ್ವೀಕರಿಸುವರು.
ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದರ ಮಾರ್ಗ ಸೂಚಿಯನ್ನು ಇಲಾಖೆ ನೀಡಲಿದೆ.ಉಡುಪಿಯು 155 ಗ್ರಾ. ಪಂ. ಹೊಂದಿದ್ದು, ಪ್ರತಿ ಸೋಮವಾರ ಜಿ.ಪಂ ಸಿಇಒ ಗ್ರಾ.ಪಂ. ಗಳ ನೀರು ಪೂರೈಕೆ ಸಹಿತ ವಿವಿಧ ಕಾರ್ಯಯೋಜನೆ ಅನುಷ್ಠಾನ ಏಜೆನ್ಸಿಗಳೊಂದಿಗೆ ಪ್ರಗತಿ ಪರಿಶೀಲಿಸುತ್ತಿದ್ದರು. ಬಳಿಕ ಸಮಸ್ಯೆಗಳ ಪರಿಹಾರಕ್ಕೆ ತಿಂಗಳಿಗೆ 2 ಬಾರಿ ಜಿಲ್ಲಾಧಿಕಾರಿಗಳ ಜತೆ ಸಭೆ, ಇಲಾಖೆಗಳ ಜತೆ ಸಮನ್ವಯ, ಅಭಿವೃದ್ಧಿಗಾಗಿ ಕಳೆದ ವರ್ಷದ ಸೂಚ್ಯಂಕದ ಆಧಾರದಲ್ಲಿ ಯೋಜನೆ ರೂಪಿಸಿ ಅನುಷ್ಠಾನ,ವಾರ್ಡ್ ಸಭೆ, ಗ್ರಾಮ ಸಭೆ, ಜಮಾಬಂದಿಗೆ ಒತ್ತು, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ ಗುಣಮಟ್ಟ ಪರಿಶೀಲನೆ, ಶಿಶು, ಗರ್ಭಿಣಿ ಮರಣ ಸಂಭವಿಸ ದಂತೆ ನಿಗಾ, ಅಪೌಷ್ಟಿಕತೆ ನಿವಾರಣೆ, ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ ಇತ್ಯಾದಿ ಕ್ರಮಗಳಿಗೆ ಈ ಪ್ರಶಸ್ತಿ ಸಂದಿದೆ.
Kshetra Samachara
10/12/2024 04:30 pm